ರಮ್ಯಾ v/s ಡಿಕೆ ಶಿವಕುಮಾರ್ – ದಿವ್ಯಸ್ಪಂದನ ಟ್ವೀಟ್ ಇನ್‌ಸೈಡ್ ಸ್ಟೋರಿ ಏನು?

ಬೆಂಗಳೂರು: ರಮ್ಯಾ ಬದಲು ಪ್ರಿಯಾಂಕಾ ಗಾಂಧಿಗೆ ರಾಜ್ಯಸಭೆ ಚುನಾವಣೆಗೆ ಟಿಕೆಟ್ ನೀಡಲು ಡಿ.ಕೆ.ಶಿವಕುಮಾರ್ ಒಲವು ತೋರಿದ್ದೇ ರಮ್ಯಾ ಸಿಟ್ಟಿಗೆ ಕಾರಣವಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

ರಾಜ್ಯದಿಂದ ರಾಜ್ಯಸಭೆ ಪ್ರವೇಶಿಸಲು ತೆರೆಮರೆಯಲ್ಲಿ ರಮ್ಯಾ ಕಸರತ್ತು ಆರಂಭಿಸಿದ್ದಾರೆ. ಆದರೆ ಪ್ರಿಯಾಂಕಾ ಗಾಂಧಿಯನ್ನು ರಾಜ್ಯದಿಂದ ರಾಜ್ಯಸಭೆಗೆ ಕಳುಹಿಸಿದರೆ ಪಕ್ಷಕ್ಕೆ ಬಲ ಬರಲಿದೆ ಎಂಬುದು ಡಿ.ಕೆ.ಶಿವಕುಮಾರ್ ಅಭಿಪ್ರಾಯವಾಗಿದೆ. ತಮಗೆ ಅವಕಾಶ ಕೈತಪ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಕಾರಣಕ್ಕೆ ರಮ್ಯಾ ತಿರುಗಿಬಿದ್ದಿರಬಹುದು ಎಂಬ ಮಾತು ಕಾಂಗ್ರೆಸ್ ಪಾಳಯದಿಂದ ಕೇಳಿ ಬಂದಿದೆ. ಇದನ್ನೂ ಓದಿ: ರಮ್ಯಾ ಆರೋಗ್ಯ ಸ್ಥಿತಿ ಸರಿಯಿಲ್ಲ, ತಪಾಸಣೆ ಮಾಡ್ಲಿ ಅನ್ನೋ ನಲಪಾಡ್ ಹೇಳಿಕೆ ಸರಿಯಲ್ಲ: ರಿಜ್ವಾನ್ ಅರ್ಷದ್

ಜೂನ್‌ನಲ್ಲಿ ನಡೆಯುವ ರಾಜ್ಯಸಭೆ ಚುನಾವಣೆ ಮೇಲೆ ಕಣ್ಣಿಟ್ಟು ರಮ್ಯಾ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಲು ಮುಂದಾಗಿದ್ದಾರೆ. ಆಪ್ತರೊಬ್ಬರ ಮೂಲಕ ಈ ಸಂದೇಶವನ್ನು ತಮ್ಮ ರಾಜಕೀಯ ಗುರು ಡಿಕೆಶಿಗೆ ರವಾನಿಸಿದ್ದರು. ಆದರೆ ಇರುವ ನಾಯಕರ ನಡುವೆ ರಮ್ಯಾಗೆ ಅವಕಾಶ ಕಷ್ಟ. ಅಲ್ಲದೆ ರಮ್ಯಾ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿಲ್ಲ ಎಂದು ಡಿಕೆಶಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಅಲ್ಲದೆ ರಾಜ್ಯದ ಎರೆಡು ಸ್ಥಾನಗಳ ಪೈಕಿ ಒಂದರಿಂದ ಪ್ರಿಯಾಂಕಾ ಗಾಂಧಿಯವರನ್ನು ರಾಜ್ಯಸಭೆ ಆಯ್ಕೆ ಮಾಡಿದರೆ ಮುಂದಿನ ವಿಧಾನಸಭಾ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ಪ್ರಿಯಾಂಕಾ ಗಾಂಧಿ ಪರವಾಗಿ ಮಾತನಾಡಿದ ಡಿಕೆಶಿ ತಮ್ಮ ಮಾಜಿ ಶಿಷ್ಯೆಯನ್ನು ಕಡೆಗಣಿಸಿದ್ದಾರೆ. ರಾಜ್ಯಸಭೆ ಪ್ರವೇಶಿಸುವ ತಮ್ಮ ಕನಸಿಗೆ ರಾಜಕೀಯ ಗುರು ಅಡ್ಡಗಾಲು ಹಾಕಿದ್ದೇ ರಮ್ಯಾ ಸಿಟ್ಟಿನ ಮೂಲ ಎನ್ನಲಾಗುತ್ತಿದೆ. ಇದನ್ನೂ ಓದಿ: ರಮ್ಯಾಗೆ ಕೋಪ ಇದ್ರೆ ಬೈಯಲಿ ಆದ್ರೆ ಟ್ವೀಟ್‍ನಲ್ಲಿ ಬೇಡ: ನಲಪಾಡ್

ಒಟ್ಟಾರೆ ಡಿಕೆಶಿ ಮತ್ತು ರಮ್ಯಾ ನಡುವಿನ ಜಟಾಪಟಿಯ ಮೂಲ ಹುಡುಕಲು ಹೊರಟ ವಿರೋಧಿ ಬಣಕ್ಕೆ ಇಂತಹದ್ದೊಂದು ಮಾಹಿತಿ ಸಿಕ್ಕಿದೆ. ‘ಕೈ’ ಪಾಳಯದ ರಾಜ್ಯಸಭೆ ಚುನಾವಣೆಯೇ ಡಿಕೆಶಿ-ರಮ್ಯಾ ಜಟಾಪಟಿಯ ಮೂಲ ಎಂಬುದು ಕಾಂಗ್ರೆಸ್ ನಾಯಕರ ಮಾತು.

ಬಿಜೆಪಿಗೆ ಎರಡು, ಕಾಂಗ್ರೆಸ್‌ಗೆ ಒಂದು ಸ್ಥಾನ ಸಿಗಲಿದೆ. ಇನ್ನೊಂದು ಸ್ಥಾನಕ್ಕೆ ಜೆಡಿಎಸ್ ಹೆಚ್ಚುವರಿ ಮತಗಳನ್ನು ಬಿಜೆಪಿಯಿಂದ ಅಥವಾ ಕಾಂಗ್ರೆಸ್‌ನಿಂದ ಪಡೆಯಬೇಕು. ಕಾಂಗ್ರೆಸ್‌ನಿಂದ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಮರು ಆಯ್ಕೆ ಬಯಸಿದ್ದರೆ, ದಿವಂಗತ ಆಸ್ಕರ್ ಫರ್ನಾಂಡಿಸ್ ಪುತ್ರಿ ಓಶಾನಿ ಫರ್ನಾಂಡಿಸ್, ಕೆ.ಹೆಚ್.ಮುನಿಯಪ್ಪ, ಡಿಕೆಶಿ ಆಪ್ತ ಕೂಡ ರಾಜ್ಯಸಭೆಯ ಟಿಕೆಟ್ ಲಿಸ್ಟ್ನಲ್ಲಿ ಇದ್ದಾರೆ. ಈ ನಡುವೆ ಪ್ರಿಯಾಂಕಾ ಗಾಂಧಿ ಸ್ಪರ್ಧೆಗೆ ದಾಳ ಉರುಳಿಸಿ ಡಿಕೆಶಿ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *