ಮಗಳನ್ನು ಟೆರೇಸ್ ಮೇಲಿಂದ ಎಸೆದಿದ್ದು ಯಾಕೆ?

ಬೆಂಗಳೂರು: ಬಡತನ ಮತ್ತು ಮಗಳ ಬುದ್ದಿಮಾಂದ್ಯತೆಯಿಂದಾಗಿ ತಾಯಿ ಸ್ವಾತಿಯು ತನ್ನ 9 ವರ್ಷದ ಮಗಳು ಶ್ರೇಯಾಳನ್ನು ಕೊಲೆ ಮಾಡಿದ್ದಾಳೆ ಎಂದು ಹೇಳಲಾಗಿದೆ.

ಶ್ರೇಯಾ ಬುದ್ದಿಮಾಂದ್ಯ ಬಾಲಕಿಯಾಗಿದ್ದಳು. ಇನ್ನೂ ಸ್ವಾತಿಗೆ ಮುಂದೆ ಮಕ್ಕಳಾಗಲ್ಲ ಎಂಬ ವಿಚಾರ ತಿಳಿದ ಪತಿರಾಯ ಸರ್ಕಾರ್ ಕಳೆದ ಆರು ತಿಂಗಳಿನಿಂದ ಹೆಂಡತಿ ಮತ್ತು ಮಗುವನ್ನು ಬಿಟ್ಟು ಬೇರೊಂದು ಕಡೆ ವಾಸವಾಗಿದ್ದನು. ಎರಡು ದಿನಗಳಿಂದ ಊಟಕ್ಕೆ ದುಡ್ಡಿಲ್ಲದೇ ತಾಯಿ ಮತ್ತು ಮಗು ಇಬ್ಬರೂ ಪರದಾಡುತ್ತಿದ್ದರು. ಸ್ವಾತಿ ತನ್ನ ಮಗಳಿಗೆ ಚಿಕಿತ್ಸೆ ಕೊಡಿಸಲು ದುಡ್ಡಿಲ್ಲದೆ ಸಾಕಷ್ಟು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ

ಮಗಳು ಶ್ರೇಯಾ ಮನೆಯಲ್ಲಿ ತುಂಬಾ ಗಲಾಟೆ ಮಾಡುತ್ತಿದ್ದಳು. ಇದನ್ನು ನೋಡಿದ ಸ್ವಾತಿ ಬೇಸತ್ತು ಮಗಳನ್ನು ಟೇರೆಸ್ ಮೇಲಿಂದ ಎಸೆದು ಕೊಲೆ ಮಾಡಿದ್ದಾಳೆ. ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಅಷ್ಟರಲ್ಲಿಯೇ ಸ್ಥಳೀಯರು ಸ್ವಾತಿಯನ್ನು ಹಿಡಿದು ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಸ್ವಾತಿ ಪುಟ್ಟೆನಹಳ್ಳಿ ಪೊಲೀಸರ ವಶದಲ್ಲಿದ್ದಾಳೆ.

ಭಾನುವಾರ ನಡೆದಿದ್ದೇನು?:
ಮಧ್ಯಾಹ್ನ 3.30ರ ವೇಳೆಗೆ ಮನೆಯ 3 ಮಹಡಿಯಿಂದ ಸ್ವಾತಿ ಶ್ರೇಯಾಳನ್ನು ಎಸೆದಿದ್ದಳು. ನಂತರ ಕೆಳಗೆ ಬಂದು ನೋಡಿದಾಗ ಶ್ರೇಯಾ ಜೀವಂತ ಇರುವುದನ್ನು ನೋಡಿದ್ದಾಳೆ. ಪುನಃ ಮಗುವನ್ನು ಎತ್ತಿಕೊಂಡು ಅದೇ ಜಾಗಕ್ಕೆ ಹೋಗಿ ಎರಡನೇ ಬಾರಿ ಮೇಲಿನಿಂದ ಕೆಳಗಡೆ ಎಸೆದಿದ್ದಾಳೆ.

ಗೊತ್ತಾಗಿದ್ದು ಹೇಗೆ?
ಸ್ವಾತಿ ಎರಡನೇ ಬಾರಿ ಬಂದು ಮಗುವನ್ನು ಎತ್ತಿಕೊಂಡು ಹೋಗಿ ಮೇಲಿನಿಂದ ಎಸೆದಿರುವುದನ್ನು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಮಗಳನ್ನು ಎಸೆಯುವುದನ್ನು ನೋಡಿದ ನಂತರ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳು ವಿವರಿಸಿದ್ದು ಹೀಗೆ:
ಶ್ರೇಯಾ ಬಿದ್ದ ಕೂಡಲೇ ನನ್ನ ಮಗಳು ಮನೆಗೆ ಬಂದು ಅಮ್ಮ ಮಗು ಮೇಲಿನಿಂದ ಬಿದ್ದಿದ್ದಾಳೆ ಎಂದು ಹೇಳಿದಳು. ಕೂಡಲೇ ನಾನು ಮನೆಯ ಹೊರಗಡೆ ಬಂದೆ. ಆಗ ಆಕೆ ಮಗಳನ್ನು ಎತ್ತಿಕೊಂಡು ಮೇಲಕ್ಕೆ ಹೋಗುತ್ತಿದ್ದಳು. ಆಕೆಯನ್ನು ನಾನು ಹಿಂಬಾಲಿಸಿ ಹೋದೆ. ಅಷ್ಟರಲ್ಲಿ ಆಕೆ ಮೇಲುಗಡೆಗೆ ಹೋಗಿ ಮಗಳನ್ನು ಎಸೆದೇ ಬಿಟ್ಟಳು. ಶ್ರೇಯಾ ಕೆಳಗಡೆ ಬಿದ್ದ ಕೂಡಲೇ ನಮ್ಮ ಯಜಮಾನರಿಗೆ ಗೊತ್ತಾಯಿತು. ಅವರು ನೋಡಿದಾಗ ಆಕೆ ಮೃತಪಟ್ಟಿರುವುದು ಗೊತ್ತಾಯಿತು. 15 ನಿಮಿಷ ಆದ ಬಳಿಕ ಆಕೆ ನೈಟಿಯನ್ನು ಬದಲಾಯಿಸಿ ಚೂಡಿಧಾರ್ ಧರಿಸಿ ಮನೆಯಿಂದ ಕೆಳಗಡೆ ಇಳಿದಳು. ಮಗಳಿಗೆ ಸರಿಯಾಗಿ ಮಾತು ಬರುತ್ತಿರಲಿಲ್ಲ. ಪ್ರತಿದಿನ ಮಗಳ ಜೊತೆ ಸ್ವಾತಿ ಆಟವಾಡುತ್ತಿದ್ದಳು. ಆದರೆ ಇಂದು ಏನಾಯ್ತು ಗೊತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *