ನಾನ್ಯಾಕೆ ಸಾಮಾಜಿಕ ಜಾಲತಾಣದ ಖಾತೆ ಹೊಂದಿಲ್ಲ ಅನ್ನೋದನ್ನು ತಿಳಿಸಿದ್ರು ಮೋಹನ್ ಭಾಗವತ್

ನವದೆಹಲಿ: ಪ್ರಸ್ತುತ ರಾಜಕೀಯ ನಾಯಕರು, ಧಾರ್ಮಿಕ ನಾಯಕರು ಸಾಮಾಜಿಕ ಜಾಲತಾಣವನ್ನು ಬಳಸುತ್ತಿರುವುದು ಗೊತ್ತೇ ಇದೆ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್‍ಎಸ್) ಮುಖ್ಯಸ್ಥ ಮೋಹನ್ ಭಾಗವತ್ ನಾನು ಯಾಕೆ ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿಲ್ಲ ಎನ್ನುವುದನ್ನು ತಿಳಿಸಿದ್ದಾರೆ.

ಈ ಕುರಿತು ಆರ್ ಎಸ್‍ಎಸ್ ಮುಖವಾಣಿ ಆರ್ಗನೈಸರ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದು, ಫೇಸ್ ಬುಕ್, ಟ್ವಿಟ್ಟರ್ ನಂತಹ ಸಾಮಾಜಿಕ ಜಾಲತಾಣಗಳು ನಮ್ಮನ್ನು ಸ್ವಾರ್ಥ ಮತ್ತು ಸ್ವಯಂ ಕೇಂದ್ರಿತವನ್ನಾಗಿ ಮಾಡುತ್ತದೆ. ಅದ್ದರಿಂದಲೇ ತಾನು ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಸಂಸ್ಥೆಗಳು ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿರುವ ಅವರು, ಸಂಸ್ಥೆಯಲ್ಲಿ ವೈಯಕ್ತಿಕವಾಗಿ ತನ್ನನ್ನು ಬಿಂಬಿಸಿಕೊಳ್ಳುವುದಕ್ಕೆ ತಮ್ಮ ವಿರೋಧವಿದೆ. ಆದರೆ ಸಂಸ್ಥೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.

ಇದೇ ವೇಳೆ ಆಧುನಿಕ ತಂತ್ರಜ್ಞಾನಕ್ಕೆ ನಾವು ಗುಲಾಮರಾಗಬಾರದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಈ ವೇದಿಕೆಗಳು ಹೆಚ್ಚಿನ ಮೌಲ್ಯ ನೀಡುತ್ತವೆ. ಆದರೆ ಅದನ್ನು ಬಳಸುವಾಗ ತುಂಬಾ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.

ಆರ್ ಎಸ್‍ಎಸ್ ಸಂಸ್ಥೆಯೂ ತನ್ನ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯನ್ನು ಹೊಂದಿದೆ. ಆದರೆ ವೈಯಕ್ತಿಕವಾಗಿ ನನ್ನ ಖಾತೆ ಇಲ್ಲ. ಇನ್ನು ಮುಂದೆಯೂ ಆರಂಭಿಸುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಧ್ವನಿ ಹಾಗೂ ಸನ್ನಿವೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಅದ್ದರಿಂದ ತಾನು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಿಂದ ದೂರವಿರುವುದಾಗಿ ತಿಳಿಸಿದರು.

Comments

Leave a Reply

Your email address will not be published. Required fields are marked *