ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ, ಇನ್ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ: ಮೋಹನ್‌ ಭಾಗವತ್‌

ನಾಗಪುರ: ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಕಾಶಿ ಜ್ಞಾನವಾಪಿ ಸೇರಿದಂತೆ ದೇಶದ ವಿವಿಧ ಮಸೀದಿಗಳ ಕುರಿತು ವಿವಾದ ಎದ್ದಿರುವ ನಡುವೆಯೇ ಮೋಹನ್‌ ಭಾಗವತ್‌ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ.

ಆರ್‌ಎಸ್‌ಎಸ್‌ ತರಬೇತಿ ಶಿಬಿರದಲ್ಲಿ ಗುರುವಾರ ಸಂಜೆ ಮಾತನಾಡಿದ ಅವರು, ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಪೂರ್ವದಲ್ಲಿ ಅವರು ಹಿಂದೂಗಳೇ ಆಗಿದ್ದರು ಎಂದು ಹೇಳಿದರು.

ಜ್ಞಾನವಾಪಿ ಮಸೀದಿ ವಿಚಾರವನ್ನು ಪ್ರಸ್ತಾಪಿಸಿ, ಹಿಂದೂ ಹಾಗೂ ಮುಸ್ಲಿಮರು ಮಾತುಕತೆ ಮೂಲಕ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಆದರೆ ಇದು ಎಲ್ಲ ಸಮಯದಲ್ಲೂ ಸಾಧ್ಯವಾಗಲಾರದು. ಹೀಗಾಗಿ ಕೋರ್ಚ್‌ನಲ್ಲಾದರೂ ತೀರ್ಪು ಬಂದಾಗ ಸ್ವೀಕಾರ ಮಾಡಬೇಕು ಎಂದು ತಿಳಿಸಿದರು.

ಇತಿಹಾಸವನ್ನು ನಾವು ರಚನೆ ಮಾಡಿಲ್ಲ. ಇಂದಿನ ಹಿಂದೂ-ಮುಸ್ಲಿಮರೂ ರಚಿಸಿಲ್ಲ. ಭಾರತದ ಮೇಲೆ ಇಸ್ಲಾಂ ರಾಜರು ದಂಡಯಾತ್ರೆ ಕೈಗೊಂಡಾಗ ಜ್ಞಾನವಾಪಿಯಂತಹ ಘಟನೆಗಳು ನಡೆದಿವೆ. ನೂರಾರು ದೇವಸ್ಥಾನಗಳು ನಾಶವಾಗಿವೆ. ಹೀಗಾಗಿ ದಿನಕ್ಕೊಂದು ಹೊಸ ವಿವಾದವನ್ನು ಯಾಕೆ ಸೃಷ್ಟಿ ಮಾಡಬೇಕು? ಎಲ್ಲ ಮಸೀದಿಗಳಲ್ಲೂ ಯಾಕೆ ಶಿವಲಿಂಗವನ್ನು ಹುಡುಕಬೇಕು ಎಂದು ಪ್ರಶ್ನಿಸಿದರು. ಇದನ್ನೂ ಓದಿ: PFI ಗೆ ಚೀನಾ, ಗಲ್ಫ್ ದೇಶಗಳಿಂದ ಹಣ

ಅಯೋಧ್ಯೆ ರಾಮಮಂದಿರ ಹೋರಾಟದಲ್ಲಿ ಆರ್‌ಎಸ್‌ಎಸ್‌ ಪಾಲ್ಗೊಂಡಿತ್ತು ನಿಜ. ಕೆಲ ಐತಿಹಾಸಿಕ ಕಾರಣ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ನಾವು ಭಾಗಿಯಾಗಿದ್ದು ನಿಜ. ಆದರೆ ಇನ್ನು ಮುಂದೆ ಈ ರೀತಿಯ ಹೋರಾಟದಲ್ಲಿ ಭಾಗಿಯಾಗುವುದಿಲ್ಲ ಎಂದು ಈ ಹಿಂದೆಯೇ ಹೇಳಿದ್ದೆವು. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದರು.

Comments

Leave a Reply

Your email address will not be published. Required fields are marked *