ದಿಢೀರ್‌ ಆರ್‌ಎಸ್‌ಎಸ್‌ ವಿರುದ್ಧ ಎಚ್‌ಡಿಕೆ ಮುಗಿಬಿದ್ದಿದ್ದು ಯಾಕೆ?

HD Kumaraswamy at Bidadi Farm House

ಬೆಂಗಳೂರು: ರಾಜ್ಯದಲ್ಲಿ ಆರ್‌ಎಸ್‍ಎಸ್ ಟಾರ್ಗೆಟ್ ಪಾಲಿಟಿಕ್ಸ್ ಮುಂದುವರೆದಿದೆ. ಮೊದಲು ಸಿದ್ದರಾಮಯ್ಯ ವರ್ಸಸ್ ಬಿಜೆಪಿ ಅಂತಿದ್ದ ಸಮರ, ಈಗ ಕುಮಾರಸ್ವಾಮಿ ವರ್ಸಸ್ ಬಿಜೆಪಿ ಎಂದಾಗಿದೆ.

ಆರ್‌ಎಸ್‍ಎಸ್‌ ಕುರಿತಾಗಿ ಪುಸ್ತಕದಲ್ಲಿನ ಸಾಲುಗಳನ್ನು ಉಲ್ಲೇಖಿಸಿ ಹಲವು ಆರೋಪ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಕೇಸರಿ ಪಡೆ ಮುಗಿಬಿದ್ದಿದೆ. ಸಂಘದ ಶಿಕ್ಷಣ ಪಡೆದವರು ಸಿವಿಲ್ ಸರ್ವೆಂಟ್ಸ್ ಆದ್ರೇ ತಪ್ಪೇ? ಕಾಮಾಲೆ ರೋಗದವರಿಗೆ ಕಾಣವುದೆಲ್ಲ ಹಳದಿ. ಕುಮಾರಸ್ವಾಮಿಗೆ ಸಂಘದ ವಿಚಾರಧಾರೆಯೇ ತಿಳಿದಿಲ್ಲ. ಅವರು ಶಾಖೆಗೆ ಬರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್  ಕಟೀಲ್ ಆಹ್ವಾನ ನೀಡಿದ್ದಾರೆ.

ಸಚಿವ ಸುನಿಲ್‌ ಕುಮಾರ್, ಕೇವಲ ನಾಲ್ಕು ಸಾವಿರ ಅಲ್ಲಾರೀ, ಪಿಡಿಓಯಿಂದ ಹಿಡಿದು ರಾಷ್ಟ್ರಪತಿವರೆಗೂ ಸಂಘಪರಿವಾರದವರಿದ್ದಾರೆ. ನೀವು ಹೇಳಿದ್ರಿ ಅಂತಾ ಇದು ನಿಲ್ಲೋದಿಲ್ಲ. ಇನ್ನಷ್ಟು ವೇಗ ಪಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್‌ಎಸ್‍ಎಸ್ ಸಂಸ್ಕೃತಿ ಗೊತ್ತಿಲ್ಲದವರು ಏನೇನೋ ಹೇಳುತ್ತಿದ್ದಾರೆ. ಯಾರನ್ನೋ ಖುಷಿ ಪಡಿಸುವ ಸಲುವಾಗಿ ಏನೇನೋ ಹೇಳಿಕೆ ನೀಡಿದರೆ ಅರ್ಥವಿರಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿಯವರು ಚೀಪ್ ಗಿಮಿಕ್ ಮಾಡಬಾರದು ಎಂದು ಕಾರಜೋಳ ಕಿವಿಮಾತು ಹೇಳಿದ್ದಾರೆ.

ಕುಮಾರಸ್ವಾಮಿಗೆ ಮಾಹಿತಿ ಕೊರತೆ ಇದೆ ಎಂದು ಎಸ್‍ಟಿ ಸೋಮಶೇಖರ್ ಹೇಳಿದ್ದಾರೆ. ಹಿಂದೆ ದೇವೇಗೌಡರೇ ಆರ್‌ಎಸ್‍ಎಸ್ ಕೆಲಸವನ್ನು ಶ್ಲಾಘಿಸಿದ್ದರು. ಇದನ್ನು ಹೆಚ್‍ಡಿಕೆ ನೆನಪು ಮಾಡ್ಕೊಬೇಕು ಎಂದು ಸಿಸಿ ಪಾಟೀಲ್ ಸಲಹೆ ನೀಡಿದ್ದಾರೆ. ಇದನ್ನೂ ಓದಿ: RSS ಹುಟ್ಟಿದಾಗಿಂದ್ಲೂ ಏನೆಲ್ಲ ಮಾಡ್ಕೊಂಡು ಬಂದಿದೆ ಅನ್ನೋದು ಜಗತ್ತಿಗೆ ಗೊತ್ತಿದೆ: ಎಚ್‍ಡಿಕೆ 

ಎಚ್‍ಡಿಕೆ ಹೇಳಿದ್ದು ಯಾಕೆ?
ಮಾಜಿ ಸಿಎಂ ಕುಮಾರಸ್ವಾಮಿ ಈಗ ಇದ್ದಕಿದ್ದಂತೆ ಬಿಜೆಪಿಯ ಮಾತೃಸಂಘಟನೆ ಆರ್‌ಎಸ್‍ಎಸ್ ವಿರುದ್ಧ ಸಮರಕ್ಕೆ ಇಳಿದಿರೋದು ಏಕೆ? ಕಾಂಗ್ರೆಸ್, ಸಿದ್ದರಾಮಯ್ಯ ವಿರುದ್ಧ ಪ್ರಯೋಗವಾಗ್ತಿದ್ದ ವಾಗ್ಬಾಣಗಳು ಆರ್‌ಎಸ್‍ಎಸ್ ಕಡೆ ತಿರುಗಿಸಲು ಕಾರಣವೇನು? ಎಂಬ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿವೆ. ಅದಕ್ಕೆ ಕಾರಣಗಳು ಹಲವು ಎಂದು ಹೇಳಲಾಗ್ತಿದೆ.

ಜೆಡಿಎಸ್ `ಬಿಜೆಪಿ ಬಿ ಟೀಂ’. `ಮುಸ್ಲಿಂ ಅಭ್ಯರ್ಥಿ ಹಾಕಿ ಬಿಜೆಪಿಗೆ ಜೆಡಿಎಸ್ ಸಹಾಯ’ ಅಪವಾದವನ್ನು ಕಾಂಗ್ರೆಸ್ ಮಾಡಿದೆ. ಇದರ ಜೊತೆ ವಿರೋಧಪಕ್ಷಗಳ ವಿರೋಧಪಕ್ಷ’ ಎಂಬ ಆರೋಪವೂ ಕೇಳಿ ಬರುತ್ತಿದೆ. ಬಿಜೆಪಿ ಬಗ್ಗೆ ಪದೇ ಪದೇ ಸದನದ ಒಳಗೆ, ಹೊರಗೆ ಮೃದುಧೋರಣೆಯನ್ನು ಕುಮಾರಸ್ವಾಮಿ ತೋರುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈ ಎಲ್ಲ ಅಪವಾದಗಳನ್ನು ತೊಳೆಯಲು ಎಚ್‌ಡಿಕೆ ಆರ್‌ಎಸ್‌ಎಸ್‌ ವಿರುದ್ಧ ಮುಗಿಬಿದ್ದಿರಬಹುದು.  ಈಗ ಆರ್‌ಎಸ್‍ಎಸ್ ವಿರೋಧಿಸಿದರೆ ಆ ಮೂಲಕ ಜಾತ್ಯಾತೀತ ಮತಗಳನ್ನು ಸೆಳೆಯಬಹುದು. ಇದು ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

Comments

Leave a Reply

Your email address will not be published. Required fields are marked *