ಡಿಕೆಶಿ ಹುಡುಕಿ ರೆಸಾರ್ಟ್ ಗೆ ಬಂದ ಐಟಿ ಅಧಿಕಾರಿಗಳು ಗುಜರಾತ್ ಶಾಸಕರನ್ನು ಸಂಪರ್ಕಿಸಿದ್ದೇಕೆ?

ಬೆಂಗಳೂರು: ಈಗಲ್ ಟನ್ ರೆಸಾರ್ಟ್‍ನಲ್ಲಿ ಐಟಿ ಅಧಿಕಾರಿಗಳು ಸಚಿವ ಡಿಕೆ ಶಿವಕುಮಾರ್ ಅವರನ್ನು ಮಾತ್ರ ಸಂಪರ್ಕಿಸಿದ್ದರು ಎಂಬ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಕೆಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆಯ ಸಿಸಿಟಿವಿ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಇದರಲ್ಲಿ ಐಟಿ ಅಧಿಕಾರಿಗಳು ರೆಸಾರ್ಟಲ್ಲಿದ್ದ ಶಾಸಕರನ್ನು ಮಾತನಾಡುತ್ತಿರೋ ದೃಶ್ಯಗಳಿವೆ.

ಗುಜರಾತ್ ಶಾಸಕರಿಗಾಗಿಯೇ ಈಗಲ್ಟನ್ ಮೇಲೆ ಐಟಿ ದಾಳಿ ನಡೆಯಿತಾ ಎಂಬ ಅನುಮಾನ ಮೂಡಿದೆ. ಕಾರಣ ರೆಸಾರ್ಟ್‍ನಲ್ಲಿ ಸಚಿವ ಡಿಕೆಶಿ ಮೇಲೆ ದಾಳಿ ವೇಳೆ ಗುಜರಾತ್ ಎಂಎಲ್‍ಎಗಳನ್ನು ಐಟಿ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಈ ಎಕ್ಸ್ ಕ್ಲೂಸಿವ್ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಕಾಂಗ್ರೆಸ್ ಶಾಸಕರಾದ ಜಾವೀದ್ ಪಿರ್ ಜಾದಾ, ಇಂದ್ರಾನಿಲ್ ರಾಜಗುರು, ಬಲದೇವ್ ಜೀ, ನಟವರ್ ಸಿಂಗ್ ಠಾಕೂರ್ ರನ್ನು ಅಧಿಕಾರಿಗಳು ಭೇಟಿಯಾಗಿದ್ದಾರೆ. ಅಧಿಕಾರಿಗಳು ಶಾಸಕರೊಂದಿಗೆ ಮಾತುಕತೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗುಜರಾತ್ ಶಾಸಕರು ಈಗಲ್‍ಟನ್ ರೆಸಾರ್ಟ್‍ನಲ್ಲಿರುವ ಕಾರಣ ಅಲ್ಲಿ ದಾಳಿ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದು ರಾಜಕೀಯ ಪ್ರೇರಿತ ಎಂದು ಕಿಡಿ ಕಾರಿತ್ತು. ಆದ್ರೆ ಇದಕ್ಕೆ ಬುಧವರಾದಂದು ಸ್ಪಷ್ಟೀಕರಣ ನೀಡಿದ್ದ ಆದಾಯ ತೆರಿಗೆ ಇಲಾಖೆ, ಈ ದಾಳಿ ಸಚಿವ ಡಿಕೆಶಿ ಮೇಲೆ ಮಾತ್ರ. ಗುಜರಾತ್ ಶಾಸಕರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿತ್ತು.

ಕರ್ನಾಟಕದ ಸಚಿವರಿಗೆ ಸಂಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಕರ್ನಾಟಕ ತನಿಖಾ ತಂಡ ಶೋಧ ನಡೆಸುತ್ತಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 132 ಅಡಿ ನಡೆಯುತ್ತಿರುವ ಈ ಶೋಧ ಸಾಕ್ಷಿ ಸಂಗ್ರಹದ ಪ್ರಕ್ರಿಯೆಯಾಗಿದೆ. ನಿರ್ದಿಷ್ಟ ಸಮಯದಿಂದ ಚಾಲ್ತಿಯಲ್ಲಿರುವ ತನಿಖೆಯ ಮುಂದುವರಿದ ಭಾಗವಾಗಿ ಈ ದಾಳಿ ನಡೆಸಲಾಗಿದೆ. ದಾಳಿಯ ಸಮಯವನ್ನ ಈ ಹಿಂದೆಯೇ ನಿಗದಿಪಡಿಸಲಾಗಿತ್ತು. ಬೇರೆ ರಾಜ್ಯದ ಶಾಸಕರನ್ನ ಕರ್ನಾಟಕಕ್ಕೆ ಕರೆತಂದಿರುವುದು ಅನಿರೀಕ್ಷಿತ ಅಷ್ಟೇ. ದಾಳಿ ನಡೆಸಲಾಗಿರುವ ಸಚಿವರು ಬೆಂಗಳೂರಿನ ರೆಸಾರ್ಟ್‍ನಲ್ಲಿ ಇದ್ದು, ಅದೇ ರೆಸಾರ್ಟ್‍ನಲ್ಲಿ ಬೇರೆ ರಾಜ್ಯದ ಶಾಸಕರನ್ನ ಇರಿಸಲಾಗಿದೆ. ಹೀಗಾಗಿ ಸಚಿವರ ರೂಮನ್ನು ಮಾತ್ರ ಪರಿಶೀಲನೆ ಮಾಡಲಾಗ್ತಿದೆ. ದಾಳಿ ತಂಡಕ್ಕೂ ಬೇರೆ ರಾಜ್ಯದ ಶಾಸಕರಿಗೂ ಯಾವುದೇ ಸಂಬಂಧವಿಲ್ಲ, ಸಂಪರ್ಕವೂ ಇಲ್ಲ. ಓರ್ವ ಕರ್ನಾಟಕ ಸಚಿವರ ಮೇಲೆ ಮಾತ್ರ ಈ ದಾಳಿ ನಡೆದಿದೆ ಎಂದು ಐಟಿ ಇಲಾಖೆ ಹೇಳಿತ್ತು. ಆದರೆ ಈಗ ಅಧಿಕಾರಿಗಳು ಗುಜರಾತ್ ಶಾಸಕರನ್ನು ಭೇಟಿ ಮಾಡಿರುವ ದೃಶ್ಯಗಳು ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ.

Comments

Leave a Reply

Your email address will not be published. Required fields are marked *