ಪಂಜಾಬ್‌ನಲ್ಲಿ ಅಮೃತ್‌ಪಾಲ್‌ ಸಿಂಗ್‌ ಅರೆಸ್ಟ್‌; ಆದ್ರೆ ಅಸ್ಸಾಂ ಜೈಲಿಗೆ ಶಿಫ್ಟ್‌ – ಯಾಕೆ ಗೊತ್ತಾ?

ನವದೆಹಲಿ: ಪ್ರತ್ಯೇಕ ಖಲಿಸ್ತಾನ (Khalistan) ಪ್ರತಿಪಾದಕ ಅಮೃತ್‌ಪಾಲ್‌ ಸಿಂಗ್‌ನನ್ನು (Amritpal Singh) ಪಂಜಾಬ್‌ (Punjab) ಪೊಲೀಸರು ಬಂಧಿಸಿದ್ದು, ಅಸ್ಸಾಂನ (Assam) ದಿಬ್ರುಗಢ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ. ಪಂಜಾಬ್‌ನಲ್ಲಿ ಬಂಧಿಸಿ ಅಸ್ಸಾಂ ಜೈಲಿಗೆ ಯಾಕೆ ಶಿಫ್ಟ್‌ ಮಾಡಿದರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಹುಟ್ಟುಕೊಂಡಿದೆ.

ಅಮೃತ್‌ಪಾಲ್‌ ಸಿಂಗ್‌ ಅಷ್ಟೇ ಅಲ್ಲ, ಆತನ ಎಂಟು ಮಂದಿ ಆಪ್ತರು ಸಹ ಈಗಾಗಲೇ ಅತ್ಯಂತ ಸುರಕ್ಷಿತ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದಾರೆ. ಇದು ಈಶಾನ್ಯದಲ್ಲಿರುವ ಅತ್ಯಂತ ಹಳೆಯ ಮತ್ತು ಅತ್ಯಂತ ಸುರಕ್ಷಿತ ಜೈಲುಗಳಲ್ಲಿ ಒಂದಾಗಿದೆ. ಇದನ್ನೂ ಓದಿ:‌ ಪರಾರಿಯಾಗಿದ್ದ ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಸರೆಂಡರ್

ಅಸ್ಸಾಂ ಜೈಲಿಗೆ ಶಿಫ್ಟ್‌ ಮಾಡಿದ್ದೇಕೆ?
ಉತ್ತರ ಭಾರತ ಭಾಗದ ಜೈಲುಗಳಲ್ಲಿ ಅಮೃತ್‌ಪಾಲ್‌ ಸಿಂಗ್ ಅಥವಾ ಪ್ರತ್ಯೇಕತಾವಾದಿ ಚಳವಳಿಯೊಂದಿಗೆ ಸಂಬಂಧ ಹೊಂದಿರುವ ದರೋಡೆಕೋರು ಇರುವ ಸಾಧ್ಯತೆಯಿದೆ. ಈ ಸಂಪರ್ಕ ಕೊಂಡಿಯನ್ನು ಕಡಿತಗೊಳಿಸುವುದು ಮುಖ್ಯವಾಗಿದೆ.

ಆರೋಪಿಗಳು ಇತರ ಕೈದಿಗಳು ಮತ್ತು ಜೈಲು ಸಿಬ್ಬಂದಿಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ತಡೆಯುವಲ್ಲಿ ಭಾಷೆಯೂ ಮುಖ್ಯ ಪಾತ್ರ ವಹಿಸುತ್ತದೆ. ದಿಬ್ರುಗಢವು ಅತ್ಯಂತ ಸುರಕ್ಷಿತ ಜೈಲು. ಅಲ್ಲದೇ, ಸ್ಥಳೀಯ ಸಿಖ್ ಸಮುದಾಯವು ಖಲಿಸ್ತಾನ್ ಚಳವಳಿಯ ಬಗ್ಗೆ ಸಹಾನುಭೂತಿ ಹೊಂದಿಲ್ಲ ಎಂಬುದು ಪೊಲೀಸ್‌ ಅಧಿಕಾರಿಗಳ ಅಭಿಪ್ರಾಯ. ಇದನ್ನೂ ಓದಿ: ಲಂಡನ್‍ಗೆ ತೆರಳುತ್ತಿದ್ದ ಅಮೃತ್‌ಪಾಲ್ ಪತ್ನಿ ಪೊಲೀಸರ ವಶಕ್ಕೆ

ದಿಬ್ರುಗಢ ಜೈಲು 170 ವರ್ಷಗಳ ಇತಿಹಾಸದಲ್ಲಿ ಇಂದಿಗೂ ಉತ್ತಮ ಸ್ಥಿತಿಯಲ್ಲಿದೆ. ಇದು ಅತ್ಯಂತ ಸುರಕ್ಷಿತ ಜೈಲು ಎಂಬ ಖ್ಯಾತಿ ಹೊಂದಿದೆ. ದಿಬ್ರುಗಢ ಪಟ್ಟಣದ ಮಧ್ಯಭಾಗದಲ್ಲಿರುವ ಜೈಲಿನ ಸ್ಥಳವು, ಬಂಧಿತರು ತಪ್ಪಿಸಿಕೊಳ್ಳುವ ಪ್ರಯತ್ನವನ್ನು ತಡೆಯಲು ಅಧಿಕಾರಿಗಳಿಗೆ ಅನುಕೂಲಕರವಾಗಿದೆ ಎನ್ನುತ್ತಾರೆ ಪೊಲೀಸರು.

ಭದ್ರತೆ ಹೆಚ್ಚಳ
ಅಮೃತ್‌ಪಾಲ್ ಸಿಂಗ್ ಸಹಾಯಕರನ್ನು ಹೊಂದಿರುವ ಸೆಲ್‌ಗಳ ಮುಂದೆ ಹೊಸ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾಮೆರಾಗಳನ್ನು ಸಹ ಸರಿಪಡಿಸಲಾಗಿದೆ. ಕೆಲವನ್ನು ಬದಲಾಯಿಸಲಾಗಿದೆ. ದಿನದ 24 ಗಂಟೆ ಅವಧಿಯಲ್ಲೂ ಪಾಳಿಯಲ್ಲಿ ಪೊಲೀಸರ ಸರ್ಪಗಾವಲು ವಿಧಿಸಲಾಗಿದೆ. ಇದನ್ನೂ ಓದಿ: ಪೊಲೀಸರ ಬಂಧನದಿಂದ ಎಸ್ಕೇಪ್ ಆಗಿದ್ದ ಅಮೃತ್‌ಪಾಲ್ ಸಿಂಗ್‌ನ ಆಪ್ತ ಸಹಾಯಕ ಅರೆಸ್ಟ್

1860 ರಲ್ಲಿ ಬ್ರಿಟಿಷರು ನಿರ್ಮಿಸಿದ ಈ ಜೈಲಿನಲ್ಲಿ 680 ಕೈದಿಗಳಿದ್ದಾರೆ. ಅಸ್ಸಾಂ ಸರ್ಕಾರವು ಬಿಡುಗಡೆ ಮಾಡುವ ಪಾಕ್ಷಿಕ ಜೈಲು ಜನಸಂಖ್ಯೆಯ ದಾಖಲೆಗಳಲ್ಲಿ ಈ ಮಾಹಿತಿ ಇದೆ. ದಿಬ್ರುಗಢ ಜೈಲು ಪ್ರಸ್ತುತ ರಾಜ್ಯದ ಮೂರನೇ ಅತಿ ಹೆಚ್ಚು ಕೈದಿಗಳನ್ನು ಹೊಂದಿರುವ ಕೇಂದ್ರ ಕಾರಾಗೃಹವಾಗಿದೆ.

ಪ್ರತ್ಯೇಕ ಖಲಿಸ್ತಾನ ಚಳವಳಿ, ಶಸ್ತ್ರಾಸ್ತ್ರಗಳ ಸಂಗ್ರಹ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಅನೇಕ ಗಣ್ಯರಿಗೆ ಬೆದರಿಕೆ ಹಾಕಿದ ಆರೋಪಗಳಡಿ ಅಮೃತ್‌ಪಾಲ್‌ ಸಿಂಗ್‌ ವಿರುದ್ಧ ಕಾರ್ಯಚರಣೆ ನಡೆಸಿ ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಕಳೆದ ಮಾರ್ಚ್‌ ತಿಂಗಳಿಂದ ಸಿಂಗ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಟರ್ಬನ್ ಬಿಚ್ಚಿಟ್ಟು, ಸನ್‌ಗ್ಲಾಸ್, ಜಾಕೆಟ್ ತೊಟ್ಟು ದೆಹಲಿ ಬೀದಿಯಲ್ಲಿ ಕಂಡುಬಂದ ಅಮೃತ್‌ಪಾಲ್ ಸಿಂಗ್