ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಕನ್ನಡಿಗ ಮಂಜುನಾಥ್‌ ರಾವ್‌ ಯಾರು?

ಚಿಕ್ಕಮಗಳೂರು/ಶಿವಮೊಗ್ಗ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗ ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌ (47) ಮೃತಪಟ್ಟಿದ್ದಾರೆ. ಮಂಜುನಾಥ್‌ ರಾವ್‌ (Manjunath Rao) ಯಾರು ಅಂತ ನೋಡೊದಾದ್ರೆ…

ಮಂಜುನಾಥ್‌ ರಾವ್‌ ಚಿಕ್ಕಮಗಳೂರಿನ (Chikkamagaluru) ಕೊಪ್ಪ ತಾಲೂಕಿನ ಕುಣಿಮಕ್ಕಿ ಮೂಲದವರು. ಅವರ ತಂದೆ ಶಿವಮೊಗ್ಗದ ಮ್ಯಾಮ್ ಕೋಸ್‌ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದರು. ಹಾಗಾಗಿ 20 ವರ್ಷಗಳ ಹಿಂದೆಯೇ ಕುಟುಂಬಸ್ಥರೊಂದಿಗೆ ಶಿವಮೊಗ್ಗಕ್ಕೆ ತೆರಳಿದ್ದ ಮಂಜುನಾಥ್‌ ತಂದೆ ನಿವೃತ್ತಿ ಬಳಿಕ ಅಲ್ಲೇ ಸೆಟಲ್‌ ಆಗಿದ್ದರು. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿದ್ದರು. ಪತ್ನಿ ಕಡೂರು ತಾಲೂಕಿನ ಬೀರೂರು ಮ್ಯಾಮ್ ಕೋಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ – ಶಿವಮೊಗ್ಗದ ಉದ್ಯಮಿ ಸಾವು, 12 ಮಂದಿಗೆ ಗಾಯ

ಇದೇ ಏಪ್ರಿಲ್‌ 19ರಂದು ಅಂದ್ರೆ ಮೂರು ದಿನಗಳ ಹಿಂದೆ ಮಂಜುನಾಥ್‌ ರಾವ್‌ ಪತ್ನಿ, ಮಗನನ್ನು ಕರೆದುಕೊಂಡು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಮಗನ ಪಿಯುಸಿ ಪರೀಕ್ಷೆ ಮುಗಿದ ಬೆನ್ನಲ್ಲೇ 6 ದಿನಗಳ ಪ್ಯಾಕೇಜ್‌ ಪ್ರವಾಸ ಕೈಗೊಂಡಿದ್ದರು. ಎರಡು ದಿನಗಳ ಹಿಂದೆ ಸಂಬಂಧಿ ಅಶೋಕ್‌ಗೆ ಕರೆ ಮಾಡಿದ್ದ ಮಂಜುನಾಥ್‌ ಏ.24ರಂದು ವಾಪಸ್‌ ಬರುವುದಾಗಿ ಹೇಳಿದ್ದರು. ಆದ್ರೆ ದುರದೃಷ್ಟವಶಾತ್‌ ಇಂದು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಇದನ್ನೂ ಓದಿ: ಬೇಲ್ಪುರಿ ತಿನ್ನುವಾಗ ನೀನು ಮುಸಲ್ಮಾನನಾ ಅಂತ ಕೇಳಿ ಗುಂಡು ಹಾರಿಸಿದ ಉಗ್ರ – ದಾಳಿ ಭೀಕರತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

ದಾಳಿ ಬಳಿಕ ಏನಾಯ್ತು?
ಭಯೋತ್ಪಾದಕ ದಾಳಿಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾದಿಂದಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಹಿನ್ನೆಲೆ ಅಮಿತ್‌ ಶಾ ತುರ್ತು ಸಭೆ ಕರೆದಿದ್ದಾರೆ. ಸಭೆಯಲ್ಲಿ ಐಬಿ ಗೃಹ ಕಾರ್ಯದರ್ಶಿ ಮತ್ತು ಗೃಹ ಸಚಿವಾಲಯದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಈ ಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದರು.

ಸದ್ಯ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ದಾಳಿಯನ್ನು ಖಂಡಿಸಿದ್ದು, ಪ್ರವಾಸಿಗರ ಮೇಲೆ ದಾಳಿ ನಡೆಸುವುದು ಅತ್ಯಂತ ಹೇಯ ಕೃತ್ಯ ಎಂದು ಎಂದು ಕಿಡಿ ಕಾರಿದ್ದಾರೆ. ಈ ನಡುವೆ ಭಯೋತ್ಪಾದಕರನ್ನು ಹಿಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯಾ ಪ್ರಾರಂಭಿಸಿವೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯ | ಸೌದಿಯಿಂದಲೇ ಮೋದಿ ಕರೆ, ಸ್ಥಳಕ್ಕೆ ಹೊರಟ ಅಮಿತ್‌ ಶಾ