ಕಲಬುರಗಿಯಲ್ಲಿ ಬಿಜೆಪಿಗೆ ಕೌಂಟರ್ – ಸದ್ದಿಲ್ಲದೇ ‘ಆಪರೇಷನ್ ಹಸ್ತ’ ನಡೆಸಿದ ಕಾಂಗ್ರೆಸ್!

ಕಲಬುರಗಿ: ಬಿಜೆಪಿಗೆ ಉಮೇಶ್ ಜಾಧವ್ ಸೆಳೆದಿದ್ದಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತ ನಡೆದಿದೆ. ಖರ್ಗೆ ಆ್ಯಂಡ್ ಟೀಂ ಕಲಬುರಗಿಯಲ್ಲಿ ಸದ್ದಿಲ್ಲದೇ ಆಪರೇಷನ್ ಹಸ್ತ ಮುಗಿಸಿದೆ.

ಬಿಜೆಪಿಯ ಮೂವರು ಪ್ರಮುಖರನ್ನು ರಾಜ್ಯ ಕಾಂಗ್ರೆಸ್ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಗೆ ಕೆಬಿ ಶಾಣಪ್ಪ, ಬಾಬುರಾವ್ ಚೌಹಾಣ್ ಮತ್ತು ಶ್ಯಾಮರಾವ್ ಪ್ಯಾಟಿ ಗುಡ್‍ಬೈ ಹೇಳಿದ್ದಾರೆ. ಮೂವರು ನಾಯಕರು ಉಮೇಶ್ ಜಾಧವ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕೆಬಿ ಶಾಣಪ್ಪ ಕಣ್ಣೀರು ಹಾಕಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಶ್ಯಾಮರಾವ್ ಪ್ಯಾಟಿ, ಕಳೆದ ಎಂಟು ದಿನಗಳಿಂದ ನಾವು ಸಭೆಗಳನ್ನು ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಸ್ಥಳೀಯ ನಾಯಕರೊಂದಿಗೆ ಚರ್ಚಿಸದೆ ಉಮೇಶ್ ಜಾಧವ್ ಕಲಬುರಗಿಯ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಜಿಲ್ಲೆಯ ಚುನಾವಣಾ ರೂಪುರೇಷಗಳ ಬಗ್ಗೆಯೂ ನಮಗೆ ಯಾರು ಮಾಹಿತಿ ನೀಡುತ್ತಿಲ್ಲ. ಸಹಜವಾಗಿಯೇ ಈ ಎಲ್ಲ ಬೆಳವಣಿಗೆಗಳಿಂದ ಮನಸ್ಸಿಗೆ ಬೇಸರವಾಗಿದೆ ಎಂದರು.

ಕೆ.ಬಿ.ಶಾಣಪ್ಪ ಮಾತನಾಡಿ, ಬಿಜೆಪಿ ತೊರೆಯಬೇಕು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೇನೆ. ಆದ್ರೆ ಯಾರಿಗೆ ಬೆಂಬಲ ನೀಡಬೇಕೆಂಬುದರ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ, ಎರಡ್ಮೂರು ದಿನಗಳಲ್ಲಿ ತಿಳಿಸುತ್ತೇನೆ. ನಾನೋರ್ವ ರಾಜಕೀಯ ಪ್ರಾಣಿಯಾಗಿದ್ದು, ಸುಮ್ಮನೆ ಕುಳಿತುಕೊಳ್ಳಲ್ಲ. ಬೇರೆ ವ್ಯಕ್ತಿಯನ್ನು ತಂದು ಚುನಾವಣೆಗೆ ನಿಲ್ಲಿಸಿ ಬೆಂಬಲ ನೀಡಬೇಕು ಎಂದ್ರೆ ಸಾಧ್ಯವಾಗಲ್ಲ. ಸಮರ್ಥ ಅಭ್ಯರ್ಥಿಯಾಗಿದ್ದರೆ, ಪಕ್ಷಕ್ಕೆ ಬರಮಾಡಿಕೊಳ್ಳುವ ಮುನ್ನ ನಮ್ಮೊಂದಿಗೆ ಚರ್ಚಿಸಬೇಕಿತ್ತು. ಇದ್ಯಾವುದೇ ಆಗದೇ ಉಮೇಶ್ ಜಾಧವ್ ಅವರನ್ನು ತಂದು ನಿಲ್ಲಿಸಿದ್ದು ಬೇಸರ ತರಿಸಿದೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಲಿತರ ಮನೆಯಲ್ಲಿ ಊಟ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರು ಹೇಳಿಕೊಂಡು ಓಡಾಡಿದ್ದರು. ಅಂದೇ ನನಗೆ ಬಿಜೆಪಿ ಬಗ್ಗೆ ಅಸಮಾಧಾನ ಉಂಟಾಗಿತ್ತು. ಕೇವಲ ದಲಿತರ ಮನೆಯಲ್ಲಿ ಊಟ ಮಾಡಿದ್ರೆ ಜಾತಿ ನಿರ್ಮೂಲನೆ ಆಗಲ್ಲ ಎಂದು ಬಿಜೆಪಿ ವಿರುದ್ಧ ಕೆ.ಬಿ.ಶಾಣಪ್ಪ ಆಕ್ರೋಶ ಹೊರಹಾಕಿದರು.

ಮಾರ್ಚ್ 18 ರಂದು ಕಲಬುರಗಿಯಲ್ಲಿ ನಡೆಯುವ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಮೂವರು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಬಿಜೆಪಿಯ ಅನೇಕರು ಕಾಂಗ್ರೆಸ್ ಸೇರ್ತಾರೆ ಅಂತ ಗುರುವಾರ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಈ ನಡುವೆ ಕೆಬಿ ಶಾಣಪ್ಪ ಪಕ್ಷ ಬಿಡಬಾರದು. ಅವರ ಮಾರ್ಗದರ್ಶನ ನಮಗೆ ಅಗತ್ಯ ಎಂದು ಉಮೇಶ್ ಜಾಧವ್ ಮನವಿ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *