ಎಚ್‍ಡಿಕೆ 2006ರಲ್ಲಿ ಬಿಜೆಪಿ ಜೊತೆ ಹೋದಾಗ ಮನೆಯಿಂದ ಹೊರ ಹಾಕಿಲ್ಲ ಯಾಕೆ: ಸಿಎಂ ಪ್ರಶ್ನೆ

ಕಲಬುರಗಿ: ಬಿಜೆಪಿ ಪ್ರಬಲ ಅಭ್ಯರ್ಥಿ ಇದ್ದ ಕಡೆ ಜೆಡಿಎಸ್ ಸಮರ್ಥ ಅಭ್ಯರ್ಥಿಗಳನ್ನು ಹಾಕಿಲ್ಲ. ಜೆಡಿಎಸ್ ಪ್ರಬಲ ಅಭ್ಯರ್ಥಿ ಇರುವ ಕಡೆ ಬಿಜೆಪಿ ಸಮರ್ಥ ಅಭ್ಯರ್ಥಿಯನ್ನು ಹಾಕಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಸೋಲಿಸಲು ಬಿಜೆಪಿ ಜೆಡಿಎಸ್ ಒಪ್ಪಂದ ಮಾಡಿಕೊಂಡಿದೆ. ಕೆಲವು ನಾಯಕರು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಅಲ್ಪಸಂಖ್ಯಾತರ ಮತಗಳು ತಪ್ಪಬಾರದು ಅಂತಾ ಬಿಜೆಪಿ ಜೊತೆ ಹೋದಲ್ಲಿ ಮನೆಯಿಂದ ಹೊರಹಾಕುತ್ತೇನೆ ಎಂದು ದೇವೇಗೌಡರು ಹೇಳುತ್ತಾರೆ. ಈ ಹಿಂದೆ ಸಹ ಹೀಗೆ ಹೇಳಿದ್ದರು. 2006ರಲ್ಲಿ ಎಚ್‍ಡಿ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಹೋದಾಗ ಅವರನ್ನು ಮನೆಯಿಂದ ಹೊರ ಹಾಕಿದ್ದಾರಾ ಎಂದು ಪ್ರಶ್ನಿಸಿದರು.

ನಾನು ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇನೆ ಎನ್ನುವ ಬಿಎಸ್‍ವೈ ಹೇಳಿಕೆಗೆ, ನಾನು ಯಾವುದೇ ಅಪರಾಧ ಮಾಡಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಸುಳ್ಳು. ಮತ್ತೆ ನಾನೇ ಸಿಎಂ ಆಗುವ ಎಲ್ಲ ಸಾಧ್ಯತೆಯಿದೆ. ಸಮೀಕ್ಷಾ ವರದಿಗಳೇ ಅಂತಿಮವಲ್ಲ ಎಂದು ಹೇಳಿದರು.

ಬಿಜೆಪಿಯವರು ಕೇಂದ್ರದಲ್ಲಿ 4 ವರ್ಷ ಅಧಿಕಾರದಲ್ಲಿದ್ದು ಲೋಕಪಾಲವನ್ನು ಜಾರಿಗೆ ತಂದಿಲ್ಲ. ಇನ್ನು ಲೋಕಾಯುಕ್ತದ ಬಗ್ಗೆ ಪ್ರಶ್ನೆ ಮಾಡಲು ಯಾವ ನೈತಿಕ ಹಕ್ಕು ಇದೆ. ಅವರ ಅಧಿಕಾರ ಅವಧಿಯಲ್ಲಿ ಒಂದು ಪ್ರಕರಣವನ್ನು ಸಿಬಿಐ ಗೆ ಕೊಟ್ಟಿರಲಿಲ್ಲ ಎಂದು ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *