ಸುಳ್ಳು ಸುದ್ದಿಗೆ ಬ್ರೇಕ್ ಹಾಕಲು ಮುಂದಾದ ವಾಟ್ಸಪ್

– ದಿನಕ್ಕೆ 5 ಮೆಸೇಜ್ ಮಾತ್ರ ಫಾರ್ವರ್ಡ್

ನವದೆಹಲಿ: ಸುಳ್ಳು ಸುದ್ದಿ ಹಬ್ಬುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ವಾಟ್ಸಪ್ ತನ್ನ ವಾಟ್ಸಪ್ ಆ್ಯಪ್ ಗಳಲ್ಲಿ ಬದಲಾವಣೆಯನ್ನು ತರಲು ಮುಂದಾಗಿದೆ.

ಇನ್ನು ಮುಂದೆ ವಾಟ್ಸಪ್ ನಲ್ಲಿ ಬಳಕೆದಾರರು ಕೇವಲ 5 ಮಂದಿಗೆ ಫಾರ್ವಡ್ ಮೇಸೆಜ್ ಮಾಡಲು ಮಾತ್ರವೇ ಸಾಧ್ಯವಾಗುತ್ತದೆ. ಅಲ್ಲದೇ ವಾಟ್ಸಪ್ ಆ್ಯಪ್ ನಲ್ಲಿರುವ ಕ್ವಿಕ್ ಫಾರ್ವರ್ಡ್ ಆಯ್ಕೆಯನ್ನು ತೆಗೆದುಹಾಕಿರುವುದಾಗಿ ವಾಟ್ಸಪ್ ತಿಳಿಸಿದೆ.

ಈ ಕುರಿತು ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ವಾಟ್ಸಪ್, ಏಕ ಏಕಕಾಲದಲ್ಲಿ ಅನೇಕ ಮಂದಿಗೆ ಸಂದೇಶಗಳನ್ನು ಫಾರ್ವರ್ಡ್ ಮಾಡಲು ಅನುವಾಗುವಂತೆ ಫೀಚರ್ ಅನ್ನು ಕೆಲ ವರ್ಷಗಳ ಹಿಂದೆ ಜಾರಿಗೊಳಿಸಿದ್ದೆವು. ಆದರೆ ಈಗ ಫಾರ್ವರ್ಡ್ ಸಂದೇಶಗಳನ್ನು ಮಿತಿಗೊಳಿಸಲು ನಾವು ನಿರ್ಧಾರ ಕೈಗೊಂಡಿದ್ದೇವೆ. ಇದನ್ನು ಪರೀಕ್ಷಾರ್ಥವಾಗಿ ಭಾರತದಲ್ಲಿರುವ ಬಳಕೆದಾರರು ಯಾವುದೇ ದೇಶಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಫಾರ್ವರ್ಡ್ ಮಾಡಲಾಗುತ್ತಿದ್ದ ಫೋಟೋಗಳು, ವಿಡಿಯೋಗಳು ಹಾಗೂ ಸಂದೇಶಗಳಿಗೆ ತಡೆಹಿಡಿಯಲಾಗಿದೆ. ಸದ್ಯಕ್ಕೆ ಈ ಹೊಸ ಮಿತಿಗೆ ಯಾವ ಪ್ರತಿಕ್ರಿಯೆ ಸಿಗಲಿದೆ ಎಂದು ನೋಡುತ್ತೇವೆ. ಹಾಗೂ ಖಾಸಗಿತನ ಕುರಿತು ಸಾಕಷ್ಟು ಕಾಳಜಿ ವಹಿಸಿರುವುದಾಗಿ ಸಂಸ್ಥೆ ತಿಳಿಸಿದೆ.

ಇತ್ತೀಚೆಗೆ ದೇಶದಲ್ಲಿ ನಡೆದ ಸಾಮೂಹಿಕ ಹಲ್ಲೆ ಪ್ರಕರಣಗಳಿಂದ ಹತ್ತಾರು ಅಮಾಯಕರು ಸಾವನ್ನಪ್ಪಿದ್ದರು. ಅಲ್ಲದೇ ದೇಶಾದ್ಯಂತ ಕಲ್ಲುತೂರಾಟ, ಗುಂಪು ಘರ್ಷಣೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸಂದೇಶಗಳೇ ಪ್ರಮುಖ ಕಾರಣ ಎಂದು ಕೇಂದ್ರ ಸರ್ಕಾರ ಗಂಭೀರ ಆಪಾದನೇ ಮಾಡಿತ್ತು. ಈ ಕುರಿತು ಪ್ರಮುಖ ಸಾಮಾಜಿಕ ಜಾಲತಾಣಗಳಿಗೆ ಸುಳ್ಳು ಸುದ್ದಿಯನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿತ್ತು. ಅಲ್ಲದೇ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳು ಕಂಡು ಕಾಣದಂತಿದ್ದರೆ, ಅಂತಹರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವಾಟ್ಸಪ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *