ಬೆಳಗಾವಿ: ನಾವು ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಮುಸ್ಲಿಂ ಸಮುದಾಯದವರಿಗೆ ದೇವಸ್ಥಾನ ಆವರಣದಲ್ಲಿ ವ್ಯಾಪಾರ ನಿರ್ಬಂಧ ಹೇರಿಕೆ ಸರಿಯಲ್ಲ. ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಭಾರತೀಯರಿಗೆ ನಿರ್ಬಂಧ ಹಾಕಿದರೆ ಏನಾಗಬಹುದು ಇದನ್ನು ಯಾರು ಒಪ್ಪುವುದಿಲ್ಲ ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ಬಿಜೆಪಿ ವಿರುದ್ಧ ಕಿಡಿಕಾರಿದರು.

ಗೋಕಾಕ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ರಾಷ್ಟ್ರಗಳಲ್ಲಿ ಭಾರತೀಯರು ನೆಲೆಸಿದ್ದೇವೆ. ಮುಸ್ಲಿಂ ರಾಷ್ಟ್ರಗಳು ಭಾರತೀಯರು ಅಲ್ಲಿ ಇರಬಾರದು ಎಂದು ತೀರ್ಮಾನ ತೆಗೆದುಕೊಂಡರೆ ಏನಾಗಬಹುದು? ಎಲ್ಲಿಗೆ ಹೋಗುವುದು ನಾವು? ಏನ್ ಹುಚ್ಚಾಟ ಇದೆಲ್ಲ, ಇದು ಸರಿಯಲ್ಲ. ಇದನ್ನು ಯಾವ ದೇವರು, ಧರ್ಮನೂ ಹೇಳಿಲ್ಲ. ಸರ್ಕಾರ ಈ ಬಗ್ಗೆ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಯಾಕೆ ಸರ್ಕಾರ ಮೌನ ವಹಿಸಿದೆ. ಅವರು ಯಾರು ಕನ್ನಡಿಗರು ಅಲ್ವೆ. ಈ ದೇಶದ ಮುಸ್ಲಿಂ ಸಮುದಾಯದವರು ಪಾಕಿಸ್ತಾನ ಮತ್ತು ಭಾರತ ಇಬ್ಭಾಗವಾದಾಗ ಇಲ್ಲೇ ಉಳಿದವರು. ಭಾರತದಲ್ಲೇ ಉಳಿದ ಮುಸ್ಲಿಂ ಸಮುದಾಯದವರು ಭಾರತೀಯರು. ಪಾಕಿಸ್ತಾನದವರು ಅಲ್ಲ ಎಂದರು. ಇದನ್ನೂ ಓದಿ: ನೀರನ್ನು ಮರುಬಳಕೆ ಮಾಡಿ: ಮೋದಿ ಕರೆ
ಮೋದಿ ಕೂಡ ಈವರೆಗೂ ಹಿಂದುತ್ವದ ಬಗ್ಗೆ ಮಾತನಾಡಿಲ್ಲ. ನಾವು ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಮುಸ್ಲಿಂ ಸಮುದಾಯದವರಿಗೆ ದೇವಸ್ಥಾನ ಆವರಣದಲ್ಲಿ ವ್ಯಾಪಾರ ನಿರ್ಬಂಧ ಹೇರುವುದು ಸರಿಯಲ್ಲ. ಇದನ್ನು ಯಾರೂ ಒಪ್ಪುವುದಿಲ್ಲ. ಅದು ಅವರ ಬದುಕು. ಅವನ ಬಂಡವಾಳ ಎಷ್ಟು ಇರುತ್ತೆ. ವ್ಯಾಪರಸ್ಥನ ಹೊಟ್ಟೆ ಮೇಲೆ ಹೊಡೆದರೆ ಅವನೇನು ತಿನ್ನಬೇಕು. ಹೊಟ್ಟೆ ಮುಖ್ಯ ನಿಮ್ಮ ಜಾತಿ, ಧರ್ಮ, ಪಕ್ಷ ಆಮೇಲೆ. ಅವನು ಈ ದೇಶದ ಪ್ರಜೆ ಅಲ್ವಾ? ಈ ರೀತಿ ಆದರೆ ಎಲ್ಲಿಗೆ ಹೋಗುತ್ತೆ ನಮ್ಮ ಭಾರತ ಎಂದು ಆತಂಕ ವ್ಯಕ್ತಪಡಿಸಿದರು.

ನಾವು ಯೋಚನೆ ಮಾಡದೇ ಎನೇನೋ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. ಇದೇ ಅಲ್ವಾ ಅಸ್ಪೃಶ್ಯತೆ ಆಚರಣೆ. ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಭಾರತೀಯರು ಅಲ್ಲಿ ಇರಬಾರದು ಎಂದು ತೀರ್ಮಾನ ತೆಗೆದುಕೊಂಡರೆ ಎಲ್ಲಿಗೆ ಹೋಗ್ತೇವಿ ನಾವು. ಬಂದವರಿಗೆಲ್ಲಾ ಕೆಲಸ ಕೊಡ್ತೀರಾ ನೀವು, ಆಗುತ್ತಾ ನಿಮಗೆ? ಎಂದು ರಾಜ್ಯ ಸರ್ಕಾರದ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ, ಮೋದಿ, ಯೋಗಿಯನ್ನು ಮುಸ್ಲಿಮರು ಪ್ರೀತಿಸುತ್ತಾರೆ: ದ್ಯಾನಿಶ್ ಅಜಾದ್ ಅನ್ಸಾರಿ
ಜಾತಿ ಮತ್ತು ಧರ್ಮದ ಆದಾರದ ಮೇಲೆ ರಾಜಕಾರಣ ಮಾಡಬಾರದು. ಈರೀತಿ ಮಾಡುವುದು ಬಹಳ ಅಪಾಯ. ಬಿಜೆಪಿಯವರು ಹಿಂದೂ ಒಲೈಕೆ ಮಾಡುವುದು. ಕಾಂಗ್ರೆಸ್ ಮುಸ್ಲಿಂ ಸಮುದಾಯದವರ ಒಲೈಕೆ ಮಾಡುವುದು ಬೇರೆ. ಸಂವಿಧಾನದಲ್ಲಿ ಮುಸ್ಲಿಂ ಸಮುದಾಯದವರು ಈ ದೇಶದಲ್ಲಿ ಇರಬಾರದು ಎಂದು ಇದೆಯಾ? ಅಂಬೇಡ್ಕರ್ ಕೊಟ್ಟ ಕಾನೂನು ಮೇಲೆ ದೇಶ ನಡೆಯುತ್ತಿದೆ. ನಾಳೆ ಎನಾದ್ರೂ ಆಗಿ ನಮ್ಮ ಮಕ್ಕಳು ಹೊರದೇಶದಿಂದ ಬಂದರೆ ಸರ್ಕಾರ ಇಲ್ಲಿ ಕೆಲಸ ಕೊಡುತ್ತಾ? ಒಟ್ಟಿಗೆ ಇಲ್ಲ ಅಂದ ಮೇಲೆ ನಿಮ್ಮ ಪ್ರಜಾಪ್ರಭುತ್ವ, ಧರ್ಮ, ಜಾತಿ ತೆಗೆದುಕೊಂಡು ಹೋಗಿ ಬಿಸಾಕಿ ಎಂದು ಆಕ್ರೋಶ ಹೊರಹಾಕಿದರು.

Leave a Reply