ಖಮೇನಿ ಕೈ ಬೆರಳಲ್ಲಿರೋ ನೀಲಿ ಕಲ್ಲಿನ ಉಂಗುರದ ರಹಸ್ಯವೇನು? ಇದು ಇರೋವರೆಗೂ ಸೋಲೇ ಇಲ್ವಾ?

ಮಧ್ಯಪ್ರಾಚ್ಯ ದೇಶಗಳಾದ ಇಸ್ರೇಲ್‌ ಹಾಗೂ ಇರಾನ್‌ (Israel Vs Iran) ಮಧ್ಯೆ ನಡೆಯುತ್ತಿರುವ ಯುದ್ಧಕ್ಕೆ ಈಗ ವಿಶ್ವದ ದೊಡ್ಡಣ್ಣ ಅಮೆರಿಕ ಅಧಿಕೃತವಾಗಿ ಪ್ರವೇಶಿಸಿದ ಮರುದಿನವೇ ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದೆ. ಇರಾನ್‌ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಪರಮಾಣು ಸ್ಥಾವರಗಳ ಮೇಲೆ ವಿಶ್ವದ ಪವರ್‌ಫುಲ್‌ ವೆಪೆನ್‌ ʻಬಂಕರ್‌ ಬಸ್ಟರ್‌ʼ ನಿಂದ ದಾಳಿ ನಡೆಸಿದ ಬೆನ್ನಲ್ಲೇ ಕತಾರ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ರಾತ್ರೋ ರಾತ್ರಿ ಮಿಸೈಲ್‌ ದಾಳಿ ನಡೆಸಿದೆ. ಆದ್ರೆ ಈ ದಾಳಿಯನ್ನು ಅಮೆರಿಕ ಸೇನೆ ಸಮರ್ಥವಾಗಿ ಎದುರಿಸಿದೆ.

ಇರಾನ್‌ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಇರಾನ್‌ ಸೇನೆ ಅಮೆರಿಕ ಸೇನಾ (US Military Base) ನೆಲೆಗಳ ಮೇಲೆ ದಾಳಿ ನಡೆಸಿದೆ. ಜೊತೆಗೆ ಹಾರ್ಮುಜ್‌ ಜಲಸಂಧಿ ಬಂದ್‌ ಮಾಡುವ ನಿರ್ಧಾರಕ್ಕೆ ಮುಂದಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಬಂಕರ್‌ನಲ್ಲೇ ಅಡಗಿ ಕುಳಿತಿರೋ ಖಮೇನಿ ಬಗ್ಗೆ ಸ್ಫೋಟಕ ರಹಸ್ಯವೊಂದು ಬೆಳಕಿಗೆ ಬಂದಿದೆ. ಅದುವೆ ʻನೀಲಿ ಕಲ್ಲಿನ ಉಂಗುರʼ (Gemstones). ಈ ಉಂಗುರ ಖಮೇನಿ ಕೈಯಲ್ಲಿ ಇರೋವರೆಗೂ ಆತನೇ ಸೋಲೇ ಇಲ್ಲವಂತೆ ಎಂದೂ ಕೂಡ ಹೇಳಲಾಗುತ್ತಿದೆ. ಬನ್ನಿ ಹಾಗಿದ್ರೆ ಆ ನೀಲಿ ಉಂಗುರದ ರಹಸ್ಯ ತಿಳಿಯೋಣ….

ಅಯತೊಲ್ಲಾ ಅಲಿ ಖಮೇನಿ ಅವರ ಪ್ರತಿ ಫೋಟೋ ಅಥವಾ ಯಾವುದೇ ವಿಡಿಯೋ ನೋಡುವಾಗಲೂ ಅವರ ಕೈ ಬೆರಳಿನಲ್ಲಿ ಕಲ್ಲಿನಿಂದ ಕೂಡಿದ ನೀಲಿ ಬಣ್ಣದ ಉಂಗುರವೊಂದು ಕಾಣುತ್ತದೆ. ಈ ಹಿಂದೆ ಇಸ್ಲಾಮಿಕ್‌ ಕ್ರಾಂತಿಯನ್ನೇ ಸೃಷ್ಟಿಸಿದ ರುಹೊಲ್ಲಾ ಖಮೇನಿ ಕೂಡ ಕೆಂಪು-ಕಂದು ಅಥವಾ ನೀಲಿ ಕಲ್ಲಿನ ಉಂಗುರಗಳನ್ನು ಧರಿಸುತ್ತಿದ್ದರು. ಆದ್ರೆ ಇದು ಕೇವಲ ಹವ್ಯಾಸವಾಗಿರಲಿಲ್ಲ. ಒಂದೆಡೆ ರತ್ನಗಳ ಮೇಲಿನ ಪ್ರೀತಿಯಾದ್ರೆ, ಇನ್ನೊಂದೆಡೆ ಶಿಯಾ ಸಂಪ್ರದಾಯದ ಭಾಗವಾಗಿತ್ತು. ಅಲ್ಲದೇ ಈ ರೀತಿಯ ಉಂಗುರಗಳನ್ನು ಧರಿಸುವುದಕ್ಕೆ ಇನ್ನೂ ಒಂದು ಮಹತ್ವದ ಕಾರಣವಿತ್ತು.

ಹೌದು. ಇಸ್ರೇಲ್‌-ಇರಾನ್‌ ನಡುವಿನ ಸಂಘರ್ಷಕ್ಕೆ ಅಮೆರಿಕ ಎಂಟ್ರಿಯಾದ ಬಳಿಕ ಇಡೀ ವಿಶ್ವದ ಚಿತ್ತ ಯುದ್ಧದ ಸನ್ನಿವೇಶಗಳು, ಜಾಗತಿಕ ಉದ್ವಿಗ್ನತೆ ಹಾಗೂ ಮುಂದಾಗುವ ಆರ್ಥಿಕ ಪರಿಣಾಮಗಳ ಮೇಲಿದ್ದರೆ, ಕೆಲವರ ಚಿತ್ತ ಮಾತ್ರ ಖಮೇನಿ ಕೈಯಲ್ಲಿರೋ ಕಲ್ಲಿನ ಉಂಗುರದ ಮೇಲಿದೆ. ಅವರ ಕೈಯಲ್ಲಿರೋ ನೀಲಿ ಕಲ್ಲು, ಹಸಿರು ಮತ್ತು ಕೆಂಪು ಕಲ್ಲು ಮತ್ತು ರತ್ನಗಳಿಂದ ಕೂಡಿದ ಉಂಗುರ ಪ್ರಮುಖ ಆಕರ್ಷಣೆಯಾಗಿವೆ. ಇದನ್ನು ಧರಿಸುವುದು ಶುಭ ಎಂದೇ ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಇರಾನ್‌ನಲ್ಲಿನ ಸಾಮಾನ್ಯ ಜನರು ಸಹ ಇದನ್ನ ಧರಿಸಲು ಇಷ್ಟಪಡುತ್ತಾರೆ.

ಕಲ್ಲಿನ ಉಂಗುರದ ಪ್ರಯೋಜನಗಳೇನು?
ಖಮೇನಿ ಸಾಮಾನ್ಯವಾಗಿ ಧರಿಸುವ ಉಂಗುರಗಳು ಬೆಳ್ಳಿಯಿಂದ ಮಾಡಲ್ಪಟ್ಟಿರುತ್ತದೆ. ಜೊತೆಗೆ ಆ ಉಂಗುರದಲ್ಲಿ ಹಳದಿ ಕಲ್ಲು ಹಾಗೂ ಕೆಲ ತಾಲಿಸ್ಮನ್‌ (ಮಾಂತ್ರಿಕ ಗುಣಗಳನ್ನು ಹೊಂದಿದೆ ಎಂದು ನಂಬಲಾದ ವಸ್ತು) ಸಹ ಮಿಶ್ರಣ ಮಾಡಲಾಗಿರುತ್ತದೆ. ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ರತ್ನಗಳೂ ಇದರಲ್ಲಿರಲಿದೆ. ಹಾಗಾಗಿ ಇಂತಹ ಉಂಗುರ ಆಧ್ಯಾತ್ಮಿಕ ಶಕ್ತಿಯನ್ನು ಒಳಗೊಂಡಿರುತ್ತದೆ ಅನ್ನೋದು ನಂಬಿಕೆ.

ಇನ್ನೂ ಖಮೇನಿ ಹೆಚ್ಚಾಗಿ ಧರಿಸುವ ನೀಲಿ, ಹಸಿರು ಉಂಗುರ ವೈಡೂರ್ಯದ್ದಾಗಿರುತ್ತದೆ, ಜೊತೆಗೆ ಸ್ಪಟಿಕ ಶಿಲೆಯ ಉಂಗುರವೂ ಅವರ ಕೈಯಲ್ಲಿರುತ್ತದೆ. ಇದನ್ನ ದುರ್‌ ಎ ನಜಾಫ್‌ ಎಂದೂ ಕೂಡ ಕರೆಯುತ್ತಾರೆ. ಇವೆಲ್ಲವು ಅತ್ಯುನ್ನತ ದರ್ಜೆಯ ಕಲ್ಲುಂಗುರಗಳಾಗಿದ್ದು ಶಿಯಾ ಸಂಪ್ರದಾಯದ ಪ್ರತೀಕವೂ ಆಗಿದೆ. ಹಾಗಾಗಿಯೇ ಖಮೇನಿ ಸೇರಿದಂತೆ ದೊಡ್ಡ ದೊಡ್ಡ ಧರ್ಮಗುರುಗಳು ಕಲ್ಲಿನ ಉಂಗುರಗಳನ್ನು ಧರಿಸುತ್ತಾರೆ.

ಸದ್ಯ ನೀಲಿ ಮತ್ತು ಹಸಿರು ಬಣ್ಣದ ಕಲ್ಲುಗಳನ್ನು ಇರಾನ್‌ನ ʻರಾಷ್ಟ್ರೀಯ ಕಲ್ಲುʼ ಎಂದೇ ಕರೆಯಲಾಗುತ್ತದೆ. ಈ ಕಲ್ಲು ನೂರಾರು ವರ್ಷಗಳಿಂದ ಇರಾನ್‌ ಸಂಸ್ಕೃತಿಯ ಭಾಗವಾಗಿದ್ದು, ʻವಿಜಯʼದ ಸಂಕೇತವೂ ಆಗಿದೆ. ಈ ರೀತಿಯ ಉಂಗುರ ಧರಿಸುವವರಿಗೆ ಹಲವು ರೀತಿಯ ಪ್ರಯೋಜನಗಳಿವೆ. ಸ್ಫಟಿಕ ಶಿಲೆಯ ಉಂಗುರವು ಮನಸ್ಸಿಗೆ ಶಾಂತಿ ನೀಡಿದ್ರೆ, ನೀಲಿ ಮತ್ತು ಹಸಿರು ಕಲ್ಲು ಶುಭವನ್ನು ಸೂಚಿಸುತ್ತದೆ. ಈ ಉಂಗುರ ಧರಿಸಿದವರಿಗೆ ಸೋಲೇ ಇಲ್ಲ, ಒಂದು ವೇಳೆ ಸೋತರೂ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂಬ ನಂಬಿಕೆ ಅಲ್ಲಿನ ಜನರದ್ದು. ಹಾಗಾಗಿ ಇರಾನ್‌, ಲೆಬನಾನ್‌ ಇರಾಕ್‌ ದೇಶಗಳಲ್ಲಿ ಇವುಗಳಿಗೆ ಬೇಡಿಕೆ ಹೆಚ್ಚಿದೆ. ಜೊತೆಗೆ ಇವು ತನ್ನದೇ ಆದ ಸ್ಥಾನಮಾನಗಳನ್ನು ಗಳಿಸಿಕೊಂಡಿವೆ. ಇಂತಹ ಕಲ್ಲುಗಳನ್ನು ವಿಶ್ವದಾದ್ಯಂತ ಶಿಯಾ ಮುಸ್ಲಿಮರಿಗೆ ತಲುಪಿಸಲೆಂದೇ ಇಸ್ರೇಲ್‌ ಮಾರುಕಟ್ಟೆ ವ್ಯವಸ್ಥೆಯನ್ನೂ ಮಾಡಿದೆ.

ಉದಾಹಣೆಗೆ ಇರಾನ್‌ನ ಫೇಮಸ್‌ ನಿಶಾಪುರದ ವೈಡೂರ್ಯ (ನೀಲಿ ಕಲ್ಲಿನ ಉಂಗುರ) ಆನ್‌ಲೈನ್‌ ವೇದಿಕೆಗಳಲ್ಲೂ ಸಿಗುತ್ತಿದೆ. ಪ್ರತಿ ಕ್ಯಾರೆಟ್‌ನ ಬೆಲೆ 10 ರಿಂದ 3,000 ಡಾಲರ್‌ನಷ್ಟು ಇರುತ್ತದೆ. ಇದರೊಂದಿಗೆ ಕೆಂಪು-ಹಳದಿ-ಕಂದು ಬಣ್ಣ ಕಲ್ಲುಗಳು ಹಾಗೂ ಸ್ಪಟಿಕ ಶಿಲೆಗಳಿಗೆ ಅವುಗಳದ್ದೇ ಆದ ಬೇಡಿಕೆಗಳಿವೆ. ಜನ ಮೆಚ್ಚಿದ ರೀತಿಯಲ್ಲಿ ಕಲ್ಲುಗಳನ್ನು ವಿನ್ಯಾಸ ಮಾಡಿಕೊಡಲಾಗುತ್ತದೆ.

ಕಥೆ ಹೇಳುವ ರತ್ನದ ಕಲ್ಲುಗಳು
ಇರಾನ್‌ನಲ್ಲಿ ಸಿಗುವ ವಿಶೇಷ ನೀಲಿ, ಕೆಂಪು, ಹಸಿರು ರತ್ನದ ಕಲ್ಲಿನ ಉಂಗುರಗಳ ಹಿಂದೆ ಒಂದೊಂದು ಕಥೆಗಳಿವೆ.

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ ಕಮಾಂಡರ್ ಖಾಸಿಮ್ ಸುಲೇಮಾನಿ ಖಮೇನಿಗೆ ಅತ್ಯಾಪ್ತರಲ್ಲಿ ಒಬ್ಬರು. ಸುಲೇಮಾನಿ ಸಿರಿಯಾ, ಇರಾಕ್‌, ಲೆಬನಾನ್‌ ಮತ್ತು ಯೆಮೆನ್‌ ದೇಶಗಳಲ್ಲಿ ಇರಾನ್‌ ಪ್ರಭಾವವನ್ನು ಪ್ರಚಾರ ಮಾಡಿದ್ದರು. ಶಿಯಾ ಸಮುದಾಯದ ಪ್ರಮುಖ ನಾಯಕನಾಗಿಯೂ ಗುರುತಿಸಿಕೊಂಡಿದ್ದ ಸುಲೇಮಾನಿ ಅಷ್ಟೇ ಶತ್ರುಗಳನ್ನು ಒಳಗೊಂಡಿದ್ದರು. 2020ರಲ್ಲಿ ಬಾಗ್ದಾದ್‌ ವಿಮಾನ ನಿಲ್ದಾಣದ ಮೇಲೆ ನಡೆದ ಡ್ರೋನ್‌ ದಾಳಿಯಲ್ಲಿ ಅವರು ಪ್ರಾಣ ಕಳೆದುಕೊಂಡರು. ಬಳಿಕ ಈ ದಾಳಿಗೆ ಅಮೆರಿಕವೇ ಮೂಲ ಕಾರಣ ಎಂದು ತಿಳಿಯಿತು. ಸುಲೇಮಾನಿಯ ಶವ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಮೃತದೇಹ ಗುರುತಿಸುವುದಕ್ಕೂ ಕಷ್ಟವಾಗಿತ್ತು. ಕೊನೆಗೆ ಅವರ ಕೈಯಲ್ಲಿ ಧರಿಸಿದ್ದ ಬೆಳ್ಳಿ ಮಿಶ್ರಿಯ ಕೆಂಪು ಉಂಗುರದಿಂದ ಮೃತದೇಹ ಪತ್ತೆ ಮಾಡಲಾಗಿತ್ತು. ಅದಕ್ಕಾಗಿ ಈಗಲೂ ಅನೇಕರು ಸುಲೇಮಾನಿ ನೆನಪಿಗಾಗಿ ಕಲ್ಲಿನ ಉಂಗುರ ಧರಿಸುತ್ತಾರೆ ಎಂದು ಹೇಳಲಾಗುತ್ತಿದೆ.