IPL 2025: ಆರ್‌ಸಿಬಿಗೆ ಆಗಿಬಾರದ ಗ್ರೀನ್ ಜೆರ್ಸಿ – ಗೆಲುವಿಗಿಂತ ಸೋಲೇ ಹೆಚ್ಚು; ಇಂದಿನ ಲಕ್‌ ಹೇಗಿದೆ?

ಜೈಪುರ್‌: ರಜತ್‌ ಪಾಟಿದಾರ್ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB_ ತಂಡ ಇಂದು (ಏ.13) ರಾಜಸ್ಥಾನ್‌ ರಾಯಲ್ಸ್‌ (RR) ವಿರುದ್ಧ ಸೆಣಸಲಿದೆ.

ಜೈಪುರದ ಸವಾಯ್‌ ಮಾನ್ಸಿಂಗ್‌ ಕ್ರಿಕೆಟ್‌ ಮೈದಾನದಲ್ಲಿ ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ. ಆರ್​ಸಿಬಿ ಆಟಗಾರರು ತಮ್ಮ ಕೆಂಪು ಮತ್ತು ಕಪ್ಪು ಮಿಶ್ರಿತ ಜೆರ್ಸಿ ಬದಲಿಗೆ ಹಸಿರು ಜೆರ್ಸಿಯಲ್ಲಿ (Green Jersey) ಕಾಣಿಸಿಕೊಳ್ಳಲಿದ್ದಾರೆ.

2011ರ ಐಪಿಎಲ್​ನಿಂದಲೂ ಪ್ರತಿ ಆವೃತ್ತಿಯ ಒಂದು ಪಂದ್ಯದಲ್ಲಿ ಆರ್‌ಸಿಬಿ ಗ್ರೀನ್ ಜೆರ್ಸಿ (Green Jersey) ತೊಟ್ಟು ಪಂದ್ಯವನ್ನಾಡಲು ಆರಂಭಿಸಿತು. ಅಂದಿನಿಂದ ಆರ್​ಸಿಬಿ ಪ್ರತಿ ವರ್ಷ ಐಪಿಎಲ್‌ನಲ್ಲಿ (IPL 2023) ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಆಡುತ್ತಿದೆ. ನಮ್ಮ ಸುತ್ತಲಿನ ಹಸಿರು ಪರಿಸರವನ್ನು ಸಂರಕ್ಷಿಸುವಂತೆ ಜಾಗೃತಿಗೊಳಿಸುವ ಉದ್ದೇಶವೂ ಇದ್ದಾಗಿದೆ.

ಗೆಲುವಿಗಿಂತ ಸೋಲೇ ಹೆಚ್ಚು:
2011ರಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ 2012, 2013, 2014ರಲ್ಲಿ ಸೋಲು ಕಂಡಿತು. 2015ರಲ್ಲಿ ಯಾವುದೇ ಫಲಿತಾಂಶವಿಲ್ಲದೇ ಪಂದ್ಯ ರದ್ದಾಯಿತು. 2016ರಲ್ಲಿ ಗೆಲುವು ಸಾಧಿಸಿತ್ತು. ನಂತರ 2017, 2018, 2019, 2020ರಲ್ಲಿ ಸೋತಿತ್ತು. 2021 ನೀಲಿ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದರೂ ಸೋಲು ಕಂಡಿತ್ತು. 2023ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ತವರು ಕ್ರೀಡಾಂಗಣದಲ್ಲೇ ಗೆಲುವು ಸಾಧಿಸಿತ್ತು. ಆದ್ರೆ ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್‌ ವಿರುದ್ಧ ಕೇವಲ 1 ರನ್‌ಗಳಿಂದ ವಿರೋಚಿತ ಸೋಲು ಕಂಡಿತ್ತು. ಇದುವರೆಗೆ 14 ಪಂದ್ಯಗಳ ಪೈಕಿ 9ರಲ್ಲಿ ಸೋಲು ಕಂಡಿದ್ದು, 4ರಲ್ಲಿ ಗೆಲುವು ಸಾಧಿಸಿದೆ. 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇಂದಿನ ಪಂದ್ಯದಲ್ಲಿ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಪುಟಿದೇಳುತ್ತಾ ಆರ್‌ಸಿಬಿ?
ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೇ ಕಳೆದ ಎರಡೂ ಪಂದ್ಯಗಳಲ್ಲಿ ತವರಿನಲ್ಲೇ ಸೋತಿರುವುದು ಬೇಸರದ ಸಂಗತಿ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಪುಟಿದೇಳುತ್ತಾ ಎಂಬುದು ಪ್ರಶ್ನೆಯಾಗಿದೆ.