ಎಚ್‍ಡಿಕೆ ಗಿಫ್ಟ್ – ಕೈ ಸಾಲ ಮನ್ನಾ ಹೇಗೆ? ಕಾಯ್ದೆಯಲ್ಲಿ ಏನಿದೆ? ಷರತ್ತು ಏನು?

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರೋ ಕುಮಾರಸ್ವಾಮಿ ಅವರು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ನಾನು ಅಧಿಕಾರಕ್ಕೆ ಬಂದಾಗ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡುತ್ತೇನೆ ಎಂದು ಹೇಳಿದ್ದೆ. ಅದರಂತೆ, ಈಗ ಗಿಫ್ಟ್ ಕೊಟ್ಟಿದ್ದೇನೆ. ರಾಜ್ಯದ ಬಡ ರೈತರನ್ನು ಋಣಮುಕ್ತ ಮಾಡಿದ್ದೇನೆ ಅಂತ ಹಂಗಾಮಿ ಸಿಎಂ ಹೇಳಿದ್ದಾರೆ. ಹಾಗಾದರೆ ಏನಿದು ಋಣಮುಕ್ತ ಕಾಯ್ದೆ? ಯಾರಿಗೆಲ್ಲಾ ಅನ್ವಯ ಆಗುತ್ತದೆ? ಷರತ್ತು ಏನು ಎನ್ನುವ ವಿವರ ಇಲ್ಲಿ ನೀಡಲಾಗಿದೆ.

ಏನಿದು ಋಣ ಮುಕ್ತ ಕಾಯ್ದೆ?
ಖಾಸಗಿ ಲೇವಾದೇವಿಗಾರರಿಂದ ಪಡೆದ ಕೈಸಾಲ ಮನ್ನಾ ಮಾಡುವ ಕಾಯ್ದೆ ಇದಾಗಿದ್ದು ನೋಡಲ್ ಅಧಿಕಾರಿಗೆ 90 ದಿನಗಳಲ್ಲಿ ಮಾಹಿತಿ ನೀಡಿದರೆ ಸಾಲ ಕಟ್ಟುವಂತಿಲ್ಲ. ಒಂದು ಕುಟುಂಬಕ್ಕೆ ಒಂದು ಸಾರಿಯಷ್ಟೇ ಸಂಪೂರ್ಣ ಸಾಲಮನ್ನಾ ಸೌಲಭ್ಯ ಸಿಗಲಿದೆ. ಋಣಮುಕ್ತ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದ್ದು, ನಿನ್ನೆಯಿಂದಲೇ ಜಾರಿಯಾಗಿದೆ. ನಿನ್ನೆಯವರೆಗೆ ಸಾಲ ಪಡೆದವರಿಗೆ ಮಾತ್ರ ಅನ್ವಯವಾಗಲಿದ್ದು ಇವತ್ತಿನಿಂದ ಪಡೆದವರ ಸಾಲ ಮನ್ನಾ ಆಗುವುದಿಲ್ಲ.

ಋಣಮುಕ್ತ ಕಾಯ್ದೆಯ ಷರತ್ತುಗಳೇನು?
ಭೂಮಿ ಇಲ್ಲದ, 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡರೈತರಿಗೆ ಅಥವಾ ವಾರ್ಷಿಕ 1.20 ಲಕ್ಷ ಆದಾಯ ಇರುವವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಆರ್‍ಬಿಐ ಅಡಿ ಕೆಲಸ ಮಾಡುವ ಹಣಕಾಸು ಸಂಸ್ಥೆಗಳು ಈ ಕಾಯ್ದೆಗೆ ಒಳಪಡುವುದಿಲ್ಲ. ರಿಜಿಸ್ಟರ್ ಫೈನಾನ್ಸ್ ಸಂಸ್ಥೆಗಳಿಗೆ ಇದು ಅನ್ವಯ ಆಗಲ್ಲ (ಉದಾ: ಸಹಕಾರಿ ಸಂಘಗಳು, ಮುತ್ತೂಟ್, ಮಣಪ್ಪುರಂ, ಅಟಿಕಾ, ಅಕ್ಷಯ ಇತ್ಯಾದಿ)

ಯಾರಿಗೆ ಈ ಕಾಯ್ದೆ ಅನ್ವಯ?
1. ಕೃಷಿ ಅಂದ್ರೆ ರೇಷ್ಮೆ, ತೋಟಗಾರಿಗೆ, ಡೈರಿ ಫಾರಂ ಇತ್ಯಾದಿ
2. ಸಣ್ಣ ಕೃಷಿಕ, ಭೂಮಿ ರಹಿತ ರೈತರು
3. ಬಡವರ್ಗದ ಜನರು
4. ವಾರ್ಷಿಕ ಆದಾಯ 1.20 ಇರುವ ಕುಟುಂಬ
6. ಸಣ್ಣ ರೈತ ಅಂದರೆ 2 ಯೂನಿಟ್ ಹೊಂದಿರುವ ರೈತ
7. ಕಾಯ್ದೆ ಅನ್ವಯ ಒಂದು ಸಾರಿ ಸಾಲಮನ್ನಾ ಅಷ್ಟೇ

2 ಯೂನಿಟ್ ಅಂದ್ರೇನು?
* 2 ಹೆಕ್ಟೇರ್ ಖುಷ್ಕಿ ಜಮೀನು ಹೊಂದಿರುವರು
* 1 ಅಥವಾ 1/4 ಹೆಕ್ಟೇರ್ ಮಳೆ ಆಶ್ರಿತ ಭೂಮಿ
* ಅರ್ಧ ಹೆಕ್ಟೇರ್ ಕಬ್ಬು, ತಂಗು ಮುಂತಾದ ಬೆಳೆ ಬೆಳೆಯುವ ಭೂಮಿ.

ಯೋಜನೆಯ ಲಾಭ ಪಡೆಯುವುದು ಹೇಗೆ?
ನೊಡಲ್ ಆಫೀಸರ್ ಮೂಲಕ ಈ ಪ್ರಕ್ರಿಯೆ ನಡೆಯುತ್ತದೆ. ಪ್ರತಿ ತಾಲೂಕಿಗೆ ಅಸಿಸ್ಟೆಂಟ್ ಕಮೀಷನರ್ ನೊಡಲ್ ಅಧಿಕಾರಿ ಆಗಿರುತ್ತಾರೆ. 90 ದಿನಗಳ ಒಳಗೆ ಸಾಲದ ಮಾಹಿತಿ ದಾಖಲೆ ಸಮೇತ ನೊಡಲ್ ಅಧಿಕಾರಿಗೆ ನೀಡಬೇಕಾಗುತ್ತದೆ. ದಾಖಲಾತಿ ಪರಿಶೀಲನೆ ಬಳಿಕ ಅಡವಿಟ್ಟ ವಸ್ತು ಬಿಡುಗಡೆಗೆ ಆದೇಶ ನೀಡಲಾಗುತ್ತದೆ.

ನೋಡಲ್ ಆಫೀಸರ್ ತಪ್ಪು ಮಾಡಿದ್ರೆ?
ನೊಡಲ್ ಅಧಿಕಾರಿ ಆದೇಶ ಪಾಲನೆ ಮಾಡದೇ ಇದ್ದರೆ 1 ವರ್ಷ ವಿಸ್ತರಿಸಬಹುದಾದ ಜೈಲು, 1 ಲಕ್ಷ ದಂಡ ವಿಧಿಸಲಾಗುತ್ತದೆ. ನೋಡಲ್ ಅಧಿಕಾರಿ ಆದೇಶವನ್ನು ಜಿಲ್ಲಾಧಿಕಾರಿ 30 ದಿನಗಳಲ್ಲಿ ಮರು ಪರಿಶೀಲಿಸಬಹುದು. ನೋಡಲ್ ಅಧಿಕಾರಿ ಫಲಾನುಭವಿಯ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಸಂಗ್ರಹ ಮಾಡಬೇಕಾಗುತ್ತದೆ.

Comments

Leave a Reply

Your email address will not be published. Required fields are marked *