ಏನಿದು ಇ-ಪಾಸ್‌ಪೋರ್ಟ್‌? ಈಗಿರುವ ಪಾಸ್‌ಪೋರ್ಟ್‌ಗಿಂತ ಇದೆಷ್ಟು ವಿಭಿನ್ನ?

ಪಾಸ್‌ಪೋರ್ಟ್‌ ಇತ್ತೀಚಿನ ದಿನಗಳಲ್ಲಿ ಅತ್ಯಗತ್ಯವಾದ ವಸ್ತುಗಳಲ್ಲಿ ಒಂದು. ಈಗಿರುವಂತೆಯೇ ಇದು ಡಿಜಿಟಲೀಕರಣಗೊಂಡಿರುವ ಪಾಸ್‌ಪೋರ್ಟ್‌ ಆಗಿದೆ. ಭದ್ರತಾ ದೃಷ್ಟಿಯಿಂದ ಇದು ಸಹಕಾರಿಯಾಗಲಿದ್ದು, ಅಕ್ರಮಗಳನ್ನು ತಡೆಯಲು ಇದು ಮುನ್ನುಡಿಯಾಗಲಿದೆ.

ಏನಿದು ಇ-ಪಾಸ್‌ಪೋರ್ಟ್‌?
ಇ-ಪಾಸ್‌ಪೋರ್ಟ್ (E-Passport) ಎಂದರೆ ಎಲೆಕ್ಟ್ರಾನಿಕ್ ಪಾಸ್‌ಪೋರ್ಟ್ ಅಥವಾ ಡಿಜಿಟಲ್ ಪಾಸ್‌ಪೋರ್ಟ್. ಇದು ಈಗಿರುವ ಪಾಸ್‌ಪೋರ್ಟ್‌ನಂತೆಯೇ ಕಾರ್ಯನಿರ್ವಹಿಸುತ್ತಿದ್ದರೂ ತಂತ್ರಜ್ಞಾನದಿಂದ ಅಭಿವೃದ್ಧಿಯಾಗಿರುತ್ತದೆ. ಇ-ಪಾಸ್‌ಪೋರ್ಟ್‌ ಇದು ಎಲೆಕ್ಟ್ರಾನಿಕ್ ಚಿಪ್ ಹೊಂದಿದ್ದು, ಇದನ್ನು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (Radio Frequency Identification) ಎಂದು ಕರೆಯಲಾಗುತ್ತದೆ. ಅದರಲ್ಲಿ ಬಯೋಮೆಟ್ರಿಕ್ ವಿವರ, ಫೋಟೋ, ಸಹಿ ಹಾಗೂ ಇತರ ಮಾಹಿತಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿರುತ್ತದೆ.

ಈಗಾಗಲೇ ಅಮೆರಿಕ, ಕೆನಡಾ, ಫ್ರಾನ್ಸ್, ಜಪಾನ್ ಹಾಗೂ ಆಸ್ಟ್ರೇಲಿಯಾದಂತಹ ಕೆಲವು ದೇಶಗಳು ಇ-ಪಾಸ್‌ಪೋರ್ಟ್‌ ಅನ್ನು ತಮ್ಮ ದೇಶಗಳಲ್ಲಿ ಅಳವಡಿಸಿಕೊಂಡಿವೆ. ಇದರಿಂದ ರಾಷ್ಟ್ರೀಯ ಭದ್ರತೆಯನ್ನು ಹಾಗೂ ಅಂತರಾಷ್ಟ್ರೀಯ ಪ್ರಯಾಣವನ್ನು ವ್ಯವಸ್ಥಿತಗೊಳಿಸಬಹುದಾಗಿದೆ. ಇದೀಗ ಭಾರತ ಇ-ಪಾಸ್‌ಪೋರ್ಟ್‌ ಅಳವಡಿಸಿಕೊಳ್ಳುವ ಮೂಲಕ ತಾಂತ್ರಿಕವಾಗಿ ಮತ್ತಷ್ಟು ಅಭಿವೃದ್ಧಿಯಾಗಲಿದೆ. 2024ರಲ್ಲಿ ಭಾರತದಲ್ಲಿ ಇ-ಪಾಸ್‌ಪೋರ್ಟ್‌ ಅನ್ನು ಪರಿಚಯಿಸಲಾಗಿದ್ದು, ಹಂತ ಹಂತವಾಗಿ ದೇಶದ ಎಲ್ಲಾ ನಗರಗಳಲ್ಲೂ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಈಗಿರುವ ಪಾಸ್‌ಪೋರ್ಟ್‌ ಗಿಂತ ಇ-ಪಾಸ್‌ಪೋರ್ಟ್‌ ಹೆಚ್ಚಿನ ಭದ್ರತೆಯನ್ನು ಒದಗಿಸಲಿದೆ. ಮತ್ತು ನಕಲಿ ಪಾಸ್‌ಪೋರ್ಟ್‌ ತಯಾರಿಕೆಗೆ ತಡೆ ನೀಡುತ್ತದೆ.

ಇ-ಪಾಸ್‌ಪೋರ್ಟ್‌ ಪ್ರಯೋಜನಗಳೇನು?

  •  ಪಾಸ್‌ಪೋರ್ಟ್‌ ನಕಲಿ ಮಾಡುವುದನ್ನು ಕಡಿಮೆ ಮಾಡುತ್ತದೆ
  •  ವಿಮಾನ ನಿಲ್ದಾಣಗಳಲ್ಲಿ ಪಾಸ್‌ಪೋರ್ಟ್‌ ಪರಿಶೀಲನೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
  •  ಪಾಸ್‌ಪೋರ್ಟ್‌ ಮಾಲಿಕತ್ವ ಹೊಂದಿರುವವರು ಮಾತ್ರ ಇದನ್ನು ಬಳಸಲು ಸಾಧ್ಯವಾಗುತ್ತದೆ.
  •  ಇವುಗಳು ಬಯೋಮೆಟ್ರಿಕ್ ಒಳಗೊಂಡಿರುವುದರಿಂದ ಹೆಚ್ಚಿನ ಭದ್ರತೆ ಒದಗಿಸುತ್ತವೆ.
  •  ಕಳ್ಳತನ, ವಂಚನೆಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
  • ವಿಮಾನ ನಿಲ್ದಾಣದ ಚೆಕ್ ಪಾಯಿಂಟ್‌ಗಳಲ್ಲಿ ಸಂಪರ್ಕ ರಹಿತ ಪರಿಶೀಲನೆಗೆ ಸಹಕಾರಿಯಾಗುತ್ತದೆ.
  • ವಿಮಾನ ನಿಲ್ದಾಣಕ್ಕೆ ಹೋದಾಗ ಕಡಿಮೆ ಸಮಯವಿದ್ದರೆ ಆ ವೇಳೆ ಪ್ರಯಾಣಿಕರಿಗೆ ಒತ್ತಡವನ್ನ ಕಡಿಮೆ ಮಾಡುತ್ತದೆ.
  • ಅಕ್ರಮ ವಲಸೆ, ಟ್ರ್ಯಾಕಿಂಗ್ ಅನ್ನು ಈ ಮೂಲಕ ತಿಳಿದುಕೊಳ್ಳಬಹುದು.

ಆನ್ಲೈನ್ ಮೂಲಕ ಇ-ಪಾಸ್‌ಪೋರ್ಟ್‌ ಅರ್ಜಿ ಸಲ್ಲಿಸುವುದು ಹೇಗೆ?

  • ಭಾರತೀಯ ಪ್ರಜೆಗಳು ಪಾಸ್‌ಪೋರ್ಟ್‌ ಸೇವಾ ಪೋರ್ಟಲ್ ಅಥವಾ ಪಾಸ್‌ಪೋರ್ಟ್‌ ಸೇವಾ ಕೇಂದ್ರ, ಅಂಚೆ ಕಚೇರಿಯ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು.
  • ಪಾಸ್‌ಪೋರ್ಟ್‌ ಪೋರ್ಟಲ್ ನಲ್ಲಿ ಲಾಗಿನ್ ಆಗಿ
  • ಹೊಸ ಪಾಸ್‌ಪೋರ್ಟ್‌ಗೆ ಆಯ್ಕೆ ಮಾಡಿ. ಬಳಿಕ ಮಾಹಿತಿಗಳನ್ನು ಉಲ್ಲೇಖಿಸಿ. ಕೊನೆಗೆ ಪಾವತಿ ಮಾಡಿ.
  • ಅದಾದ ಬಳಿಕ ಅಪಾಯಿಂಟ್ಮೆಂಟ್ ಬುಕ್ ಮಾಡಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸ್ಲಾಟ್ ಬುಕ್ ಮಾಡಿ.
  • ಆ ದಿನದಂದು ನಿಮ್ಮ ಮೂಲ ದಾಖಲೆಗಳೊಂದಿಗೆ ತೆರಳಿ ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದಾಗಿದೆ.

ಈಗಾಗಲೇ ಇ-ಪಾಸ್‌ಪೋರ್ಟ್‌ ಅಳವಡಿಸಿಕೊಂಡಿರುವ ಭಾರತದ ನಗರಗಳು

  • ನಾಗ್ಪುರ
  • ಭುವನೇಶ್ವರ
  • ಜಮ್ಮು
  • ಪಣಜಿ
  • ಶಿಮ್ಲಾ
  • ರಾಯಪುರ
  • ಅಮೃತಸರ
  • ಜೈಪುರ
  • ಚೆನ್ನೈ
  • ಹೈದರಾಬಾದ್
  • ಸೂರತ್
  • ರಾಂಚಿ

ಇತ್ತೀಚಿಗಷ್ಟೇ ಮಾರ್ಚ್ 3 ರಂದು ತಮಿಳುನಾಡು ಹಾಗೂ ಚೆನ್ನೈ ಇ-ಪಾಸ್‌ಪೋರ್ಟ್‌ ಅಳವಡಿಸಿಕೊಂಡಿವೆ. ರಾಜ್ಯದ 20,700 ಜನರಿಗೆ ಈಗಾಗಲೇ ಇ-ಪಾಸ್‌ಪೋರ್ಟ್‌ ಅನ್ನು ಒದಗಿಸಲಾಗಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ನಾಸಿಕ್‌ನ ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ನಲ್ಲಿ ಇ-ಪಾಸ್‌ಪೋರ್ಟ್‌ ತಯಾರಾಗುತ್ತದೆ.