ಏನ್ ಕೇಳಿಸ್ಕೊಂಡ್ಯೋ ಪಾಟೀಲ್, ಇದ್ರಿಂದ ನಿಂಗೂ, ನಮಗೂ ಡ್ಯಾಮೇಜ್: ಸಿಎಂ ಕ್ಲಾಸ್

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತುಮಕೂರಿನ ಸಿದ್ಧಗಂಗಾ ಶ್ರೀಗಳು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿಟ್ಟ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಪುಟ ಸಭೆಯಲ್ಲಿ ಇಂದು ಸಿದ್ದರಾಮಯ್ಯ, ಶ್ರೀಗಳ ಜತೆ ಮಾತನಾಡಿದ್ದನ್ನ ಅವಸರದಲ್ಲಿ ಮಾಧ್ಯಮಗಳ ಮುಂದೆ ಹೋಗಿದ್ದು ಯಾಕೆ ಎಂದು ಪಾಟೀಲ್ ಅವರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ, ಅವರು ಏನು ಹೇಳಿದ್ದನ್ನ ನೀನು ಏನ್ ಕೇಳಿಸ್ಕೊಂಡಿದ್ದಿ. ಶ್ರೀಗಳು ಸಮುದಾಯದ ಸುಪ್ರೀಂ ಕೋರ್ಟ್ ಇದ್ದಂತೆ. ಅವರ ವಿರುದ್ಧವೇ ಏನೇನೋ ಮಾತನಾಡಿದ್ದಿ. ಇದರಿಂದ ನಿನಗೂ, ಪಕ್ಷಕ್ಕೂ, ಸರ್ಕಾರಕ್ಕೂ ಡ್ಯಾಮೇಜ್ ಆಗಿದೆ ಎಂದು ಹೇಳಿ ತರಾಟಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.

ಇದನ್ನೂ ಓದಿ: ನಡೆದಾಡುವ ದೇವರಲ್ಲಿ ಸಾರ್ವಜನಿಕವಾಗಿ ಎಂಬಿ ಪಾಟೀಲ್ ಕ್ಷಮೆ ಕೇಳಬೇಕು: ಎಚ್‍ಡಿಕೆ

ಪೌರಾಡಳಿತ ಖಾತೆಯ ಸಚಿವ ಈಶ್ವರ್ ಖಂಡ್ರೆ ಅವರಿಗೂ ಕ್ಲಾಸ್ ತೆಗೆದುಕೊಂಡ ಸಿಎಂ, ನಿಮ್ದು ಏನ್ರೀ? ನೀವು ಮಾಧ್ಯಮಗಳ ಮುಂದೆ ಏನೇನೋ ಮಾತಾಡ್ತಿದ್ದೀರಿ. ಇದರಿಂದ ನಮ್ಗೆ ಅನುಕೂಲ ಏನಿಲ್ಲ, ಬಿಜೆಪಿ ಅವರಿಗೆ ಅನುಕೂಲ ಆಗುತ್ತೆ ಅಷ್ಟೇ. ಅದೇನ್ ಮಾಡ್ತಿರೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕೊನೆಗೆ ಸಿದ್ಧಗಂಗಾ ಶ್ರೀಗಳ ವಿಚಾರವಾಗಿ ಆಗಿರೋ ಡ್ಯಾಮೇಜ್ ಅನ್ನು ನೀವೇ ಸರಿ ಮಾಡಬೇಕು. ಇನ್ನೆರಡು ದಿನದೊಳಗೆ ಬಗೆಹರಿಸಿಕೊಳ್ಳಿ ಎಂದು ಇಬ್ಬರು ಸಚಿವರಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಪ್ರತಿಕ್ರಿಯೆ ನೀಡಲ್ಲ: ಶಿವಕುಮಾರ ಸ್ವಾಮೀಜಿಗಳ ಸ್ಪಷ್ಟನೆ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಎಂಬಿ ಪಾಟೀಲ್, ಇನ್ನು ಎರಡು ದಿನಗಳ ಕಾಲ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಾನು ನಿರ್ಧಾರ ತೆಗೆದುಕೊಂಡಿದ್ದೇನೆ. ಎರಡು ದಿನಗಳ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *