– ಚಾರ್ಮಾಡಿ ಬಳಿ ಉಕ್ಕಿ ಹರಿದ ಮೃತ್ಯುಂಜಯ ಹೊಳೆ
– ವಿಚಿತ್ರವಾಗಿ ಅಬ್ಬರಿಸುತ್ತಿದೆ ನೇತ್ರಾವತಿಯ ಉಪನದಿಗಳು
ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ಕಡಿಮೆಯಾದರೂ, ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆರಾಯ ಪ್ರತಾಪ ತೋರುತ್ತಿದ್ದು, ಹಠಾತ್ತನೆ ಮೇಘ ಸ್ಫೋಟದ ರೀತಿಯಲ್ಲಿ ಮಳೆಯಾಗಿ ಘಟ್ಟಗಳ ಮಧ್ಯೆ ಜಲಸ್ಫೋಟ ಸಂಭವಿಸಿದೆ. ಇದರಿಂದ ಸ್ಥಳೀಯರಲ್ಲಿ ಭಾರೀ ಆತಂಕ ಮನೆ ಮಾಡಿದೆ.
ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆರಾಯ ಪ್ರತಾಪ ತೋರುತ್ತಲೇ ಇದ್ದಾನೆ. ಇದೀಗ ಹಠಾತ್ತನೆ ಮೇಘ ಸ್ಫೋಟದ ರೀತಿಯಲ್ಲಿ ಮಳೆಯಾಗಿ ಘಟ್ಟಗಳ ಮಧ್ಯೆ ಜಲಸ್ಫೋಟ ಸಂಭವಿಸುತ್ತಿದೆ. ದಟ್ಟಾರಣ್ಯದಲ್ಲಿ ಬೆಟ್ಟಗಳ ನಡುವೆ ಸ್ಫೋಟ ಉಂಟಾಗುತ್ತಿದ್ದು, ಕಲ್ಲು, ಮಣ್ಣು, ಭಾರೀ ಪ್ರಮಾಣದ ಮರಗಳು ಛಿದ್ರಗೊಂಡು ನೀರಿನೊಂದಿಗೆ ಕೊಚ್ಚಿ ಬರುತ್ತಿದೆ. ಘಟ್ಟದಲ್ಲಿನ ಜಲ ಸ್ಫೋಟದಿಂದ ನಿನ್ನೆ ಚಾರ್ಮಾಡಿ ಬಳಿಯ ಮೃತ್ಯುಂಜಯ ಹೊಳೆ ಇದ್ದಕ್ಕಿದ್ದಂತೆ ಉಕ್ಕಿಹರಿದಿದ್ದು, ನದಿ ಪಾತ್ರದ ನಿವಾಸಿಗಳು ಭಯಭೀತರಾಗಿ ಸುರಕ್ಷಿತ ಸ್ಥಳಕ್ಕೆ ತೆರಳಿ ರಾತ್ರಿ ಕಳೆದಿದ್ದಾರೆ.

ಭಾರೀ ಮಳೆಯಾದಾಗ ನೇತ್ರಾವತಿಯ ಉಪನದಿಗಳು ಹೀಗೆ ವಿಚಿತ್ರವಾಗಿ ಅಬ್ಬರಿಸುತ್ತಿರುವುದು ಘಟ್ಟದ ತಪ್ಪಲಿನ ಗ್ರಾಮಸ್ಥರಲ್ಲಿ ಭೀತಿ ಸೃಷ್ಟಿಸಿದೆ. ಇತಿಹಾಸದಲ್ಲಿ ಎಂದೂ ಕಂಡರಿಯದ ಆತಂಕಕಾರಿ ಘಟನೆಗಳು ಘಟ್ಟಗಳಲ್ಲಿ ಸಂಭವಿಸುತ್ತಿರುವುದು ಆತಂಕ ಸೃಷ್ಟಿಸಿದೆ. ಈ ವೈಪರೀತ್ಯದ ಪರಿಣಾಮ ಚಾರ್ಮಾಡಿಯಲ್ಲಿ ಒಂದಾಗಿ ಹರಿಯುತಿದ್ದ ಅಣಿಯೂರು ಹೊಳೆ ಹೊಸ್ಮಠ ಎಂಬಲ್ಲಿ ಎರಡು ಕವಲುಗಳಾಗಿ ಬೇರ್ಪಟ್ಟಿದೆ. ಭಾರೀ ಪ್ರಮಾಣದ ನೀರಿನೊಂದಿಗೆ ಕಲ್ಲುಗಳು ಹಾಗೂ ಮರದ ಅವಶೇಷಗಳು ಕೊಚ್ಚಿ ಬಂದು ನದಿ ಮಧ್ಯೆ ನಡುಗಡ್ಡೆ ಸೃಷ್ಟಿಯಾಗಿದೆ.

ಕೃಷಿ ತೋಟಗಳಿದ್ದ ಜಾಗದಲ್ಲಿ ಹೊಸ ಹೊಳೆಯೇ ಸೃಷ್ಟಿಯಾಗಿದೆ. ಅಲ್ಲಿಂದ ನೋಡಿದರೆ, ಘಟ್ಟದ ಮೇಲ್ಭಾಗದಲ್ಲಿ ಬೆಟ್ಟಗಳ ಮಧ್ಯೆ ಬೃಹತ್ತಾಗಿ ಬಿರುಕು ಬಿಟ್ಟು ಅರಣ್ಯ ನಾಶವಾಗಿರುವುದೂ ಕಂಡುಬರುತ್ತಿದೆ. ಇದರಿಂದ ಸ್ಥಳೀಯರು ಭಯಗೊಂಡಿದ್ದು ಸ್ಥಳಾಂತರಗೊಳ್ಳುತ್ತಿದ್ದಾರೆ.
ಭೀಕರ ಮಳೆಯಿಂದಾಗಿ ಚಾರ್ಮಾಡಿ ಘಾಟ್‍ನಲ್ಲಿ ಭೂ ಕುಸಿತ ಸಂಭವಿಸಿತ್ತು. ಅಲ್ಲದೆ, ಮರಗಳು ಸಹ ರಸ್ತೆಗೆ ಬಿದ್ದಿದ್ದವು, ರಸ್ತೆಯನ್ನು ಸ್ವಚ್ಛಗೊಳಿಸಿ, ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಆದರೆ, ಆಗಸ್ಟ್ 30 ರಂದು ಮತ್ತೆ ಆದೇಶ ಹೊರಡಿಸಿ, ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಮತ್ತೆ ಬ್ರೇಕ್ ಹಾಕಿತ್ತು.

ಪೊಲೀಸರು ನೀಡಿರುವ ವರದಿಯಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಚಾರ್ಮಾಡಿ ಘಾಟ್ ಸಹಜ ಸ್ಥಿತಿಗೆ ಬರಲು ಇನ್ನಷ್ಟು ದಿನಗಳು ಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ಪೊಲೀಸರ ವರದಿ ಪಡೆದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್, ಎಲ್ಲ ರೀತಿಯ ವಾಹನ ಸಂಚಾರ ನಿಷೇಧಗೊಳಿಸಿ ಆದೇಶ ಹೊರಡಿಸಿದ್ದರು. ಹೀಗಾಗಿ ಅನಿರ್ಧಿಷ್ಟಾವಧಿಗೆ ಮತ್ತೆ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.

Leave a Reply