ಕೊನೆಗೂ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ 85 ವರ್ಷದ ವಿಂಡೀಸ್ ವೇಗಿ

ಲಂಡನ್: ಸಾಮಾನ್ಯವಾಗಿ ಕ್ರಿಕೆಟ್‍ನಲ್ಲಿ 30 ವರ್ಷದಿಂದಲೇ ಆಟಗಾರರ ನಿವೃತ್ತಿ ಮಾತುಗಳು ಆರಂಭವಾಗುತ್ತದೆ. ಆದರೆ ವೆಸ್ಟ್ ಇಂಡೀಸ್ ಆಟಗಾರ ಸೆಸಿಲ್ ರೈಟ್ ಮಾತ್ರ ತಮ್ಮ 85ನೇ ವಯಸ್ಸಿನಲ್ಲಿ ಸುದೀರ್ಘ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಸಿಸಿಲ್ ರೈಟ್ 1959ರ ವರೆಗೂ ವೆಸ್ಟ್ ಇಂಡೀಸ್‍ನಲ್ಲಿ ಕ್ರಿಕೆಟ್ ಆಡಿದ್ದರು. ಅಲ್ಲದೇ ವೆಸ್ಟ್ ಇಂಡೀಸ್‍ ಖ್ಯಾತ ಕ್ರಿಕೆಟಿಗರಾದ ವಿವ್ ರಿಚರ್ಡ್ಸ್ ಹಾಗೂ ಜೊಯೆಲ್ ಗಾರ್ನರ್ ಜೊತೆ ಜಮೈಕಾ ಕ್ರಿಕೆಟ್ ಕ್ಲಬ್ ಪರ ಆಡಿದ್ದರು. ಆ ಬಳಿಕ 1960 ರಲ್ಲಿ ಇಂಗ್ಲೆಂಡ್ ತೆರಳಿ ಅಲ್ಲಿಯೇ ನೆಲೆಸಿ ತಮ್ಮ ಕ್ರಿಕೆಟ್ ಮುಂದುವರಿಸಿದರು. ಇವರ 60 ವರ್ಷದ ಕ್ರಿಕೆಟ್ ವೃತ್ತಿ ಜೀವನದಲ್ಲಿ ಇದುವರೆಗೂ 7 ಸಾವಿರ ವಿಕೆಟ್ ಪಡೆದಿದ್ದಾರೆ. ವಿಶೇಷ ಎಂದರೆ ಇವರ ಕ್ರಿಕೆಟ್ ಜೀವನ ಒಂದು ಹಂತದಲ್ಲಿ 5 ಸೀಸನ್  ಗಳಿಂದ ಬರೋಬ್ಬರಿ 538 ವಿಕೆಟ್ ಪಡೆದಿದ್ದರು.

ನಿವೃತ್ತಿಯ ಹೊರತಾಗಿಯೂ ಕ್ರಿಕೆಟ್‍ನಿಂದ ದೂರ ಉಳಿಯುವ ಮನಸ್ಸು ಮಾಡದ ಸೆಸಿಲ್ ಮುಂದಿನ ಅವಧಿಯಲ್ಲಿ ಯುವ ಕ್ರಿಕೆಟ್ ಆಟಗಾರರಿಗೆ ಮಾರ್ಗದರ್ಶನ ನೀಡಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 7 ಶನಿವಾರದಂದು ಸಿಸಿಲ್ ಅವರು ತಮ್ಮ ಅಂತಿಮ ಪಂದ್ಯವನ್ನು ಆಡಲಿದ್ದಾರೆ.

Comments

Leave a Reply

Your email address will not be published. Required fields are marked *