ಶವ ಪೆಟ್ಟಿಗೆಗಾಗಿ ನಾನು ಕಾಯಲ್ಲ, ಅದೇ ನನಗಾಗಿ ಕಾಯುತ್ತೆ: ಮಮತಾ ಬ್ಯಾನರ್ಜಿ

– ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಗುಡುಗಿದ ದೀದಿ

ನವದೆಹಲಿ: ಶವ ಪೆಟ್ಟಿಗೆಗಾಗಿ ನಾನು ಕಾಯುವುದಿಲ್ಲ, ಶವ ಪೆಟ್ಟಿಗೆಯೇ ನನಗಾಗಿ ಕಾಯುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನಗರದ ಜಂತರ್‍ಮಂತರ್ ನಡೆದ ಸಮಾವೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೋಲ್ಕತ್ತಾದಲ್ಲಿರುವ ಕಾಳಿಘಾಟ್ ಮನೆಗೂ ಕೇಂದ್ರದ ಅಧಿಕಾರಿಗಳನ್ನು ಕಳುಹಿಸಬಹುದು. ಅವರಿಗೂ ಅಡುಗೆ ಮಾಡಿ ಬಡಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ಕಳೆದ ತಿಂಗಳು ಕೋಲ್ಕತ್ತಾ ನಿವಾಸದಲ್ಲಿ ಮಹಾಘಟಬಂಧನ್ ಸಮಾವೇಶದಲ್ಲಿ ಪಕ್ಷಗಳ ನಾಯಕರಿಗೆ ತಿಂಡಿ ಬಡಿಸಿದ್ದನ್ನು ಸಮರ್ಥಿಸಿಕೊಂಡರು. ಇದನ್ನು ಓದು: ಖುದ್ದಾಗಿ ತಟ್ಟೆ ಹಿಡಿದು ಮಹಾಮೈತ್ರಿ ನಾಯಕರಿಗೆ ತಿಂಡಿ ಬಡಿಸಿದ ದೀದಿ

ಸಿಬಿಐ ಅಧಿಕಾರಿಗಳನ್ನು ನಾಳೆ ನನ್ನ ಮನೆಗೂ ಕಳುಹಿಸುತ್ತಾರೆ. ಆದರೆ ಅವರನ್ನು ಸ್ವಲ್ಪ ಸಮಯ ನಿಲ್ಲುವಂತೆ ತಿಳಿಸಿ ಮನೆಯಲ್ಲಿ ಅಡುಗೆ ಮಾಡಿ ಉಣಬಡಿಸುತ್ತೇನೆ. ಅಷ್ಟೇ ಅಲ್ಲದೆ ಅಧಿಕಾರಿಗಳಿಗೆ ಸಸ್ಯಾಹಾರ, ಮಾಂಸಾಹಾರ, ರೋಟಿ ಬೇಕಾದರೂ ಮಾಡಿಕೊಡುತ್ತೇನೆ. ನಾನು ಭಯವನ್ನು ಬಿಟ್ಟಿದ್ದೆ, ನಿಮ್ಮ ಬೆದರಿಕೆಗೆ ಹೆದರುವುದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು. ಇದನ್ನು ಓದಿ: ಸಿಬಿಐ ವಿಚಾರಣೆಗೆ ರಾಜೀವ್ ಕುಮಾರ್ ಹಾಜರಾಗಬೇಕು: ಕೋರ್ಟ್ ಕಲಾಪ ಹೀಗಿತ್ತು

ನಾನು ಅನೇಕ ಸರ್ಕಾರಗಳನ್ನು ನೋಡಿದ್ದೇನೆ. ಆದರೆ ಈಗ ಇರುವಂತೆ ಯಾವುದೇ ಸರ್ಕಾರ ಕಂಡಿಲ್ಲ. ಅವರು ಕೋಲ್ಕತ್ತಾ ಪೊಲೀಸ್ ಆಯುಕ್ತರ ಮನೆಗೆ ಸಿಬಿಐ ಅಧಿಕಾರಿಗಳನ್ನು ಕಳುಹಿಸಿದ್ದರು. ಇಂತಹ ಕನಿಷ್ಠ ಮಟ್ಟದ ಸರ್ಕಾರವನ್ನು ನಾನು ನೋಡಿಲ್ಲ ಎಂದು ಹೆಸರನ್ನು ಸೂಚಿಸದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಐಪಿಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ಜೊತೆಗೆ ಅವರ ಪದಕ (ಮೆಡಲ್‍ಗಳನ್ನು) ಹಿಂಪಡೆಯಲು ಸೂಚಿಸುತ್ತದೆ. ಈ ರೀತಿ ಹೇಳಿಕೆ ನೀಡಬಹುದೇ? ಅವರ ಹೇಳಿಕೆಯಿಂದಾಗಿ ಪಶ್ಚಿಮ ಬಂಗಾಳದ ಎಲ್ಲಾ ಅಧಿಕಾರಿಗಳು ಮೆಡಲ್‍ಗಳನ್ನು ವಾಪಸ್ ನೀಡುತ್ತಾರೆ ಎಂದು ಗುಡುಗಿದರು.  ಇದನ್ನು ಓದಿ: ಮೋದಿ ಮತ್ತೆ ಪ್ರಧಾನಿಯಾಗಲ್ಲ, ಸುಪ್ರೀಂನಿಂದ ನೈತಿಕ ಗೆಲುವು – ಮಮತಾ ಬ್ಯಾನರ್ಜಿ

ಅವರು ತಮ್ಮ ಅಧಿಕಾರಿಗಳು, ಸಂಪುಟ ಸಚಿವರು ಹಾಗೂ ಮಾಧ್ಯಮಗಳ ಮೇಲೆ ನಿಗಾ ಇಡುತ್ತಾರೆ. ಏಕೆಂದರೆ ಅವರಿಗೆ ಯಾರೊಬ್ಬರ ಮೇಲೂ ನಂಬಿಕೆಯಿಲ್ಲ. ನನ್ನ ಹಾಗೂ ವೇದಿಕೆ ಮೇಲಿರುವ ನಾಯಕರ ಫೋನ್ ಅನ್ನು ಅವರು ಟ್ಯಾಪ್ ಮಾಡಿರುತ್ತಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *