ನಮಾಜ್ ವೇಳೆ ರೋಡ್ ಬಂದ್ ಖಂಡಿಸಿ ಬಿಜೆಪಿಯಿಂದ ಹನುಮಾನ್ ಚಾಲೀಸಾ ಪಠಿಸಿ ಪ್ರತಿಭಟನೆ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪ್ರತೀ ಶುಕ್ರವಾರ ಮುಸ್ಲಿಮರು ಪ್ರಾರ್ಥನೆ (ನಮಾಜ್) ಸಲ್ಲಿಸುವ ವೇಳೆ ರೋಡ್ ಬಂದ್ ಆಗುತ್ತಿರುವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹನುಮಾನ್ ಚಾಲಿಸಾ ಪಠಿಸಿ ಪ್ರತಿಭಟನೆ ಮಾಡಿದ್ದಾರೆ.

ಪ್ರತಿ ಶುಕ್ರವಾರದ ನಮಾಜ್ ಸಮಯದಲ್ಲಿ ಮಸೀದಿ ಮುಂಭಾಗದ ರಸ್ತೆ ಸಂಚಾರ ನಿಷೇಧಿಸಲಾಗುತ್ತಿದೆ. ಇದರಿಂದ ವಾಹನ ಚಲಿಸುವವರಿಗೆ ತೊಂದರೆಯಾಗುತ್ತದೆ ಎಂದು ಹೇಳಿ ಬಿಜೆಪಿ ಯುವ ಮೋರ್ಚಾದವರು ಹೌರ ನಗರದ ಜಿ.ಟಿ ರಸ್ತೆಯಲ್ಲಿ ಕುಳಿತು ಹನುಮಾನ್ ಚಾಲಿಸಾ ಪಠಣ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ.

ರಸ್ತೆ ಸಂಚಾರ ಬಂದ್ ಮಾಡುವುದರಿಂದ ನಮಗೆ ತುಂಬ ತೊಂದರೆಯಾಗುತ್ತಿದೆ. ಶುಕ್ರವಾರ ನಮಗೆ ಸರಿಯಾದ ಸಮಯದಲ್ಲಿ ಕಚೇರಿಗೆ ತಲುಪಲು ಆಗುತ್ತಿಲ್ಲ ಎಂದು ಮಂಗಳವಾರ ಸಂಜೆ ರಸ್ತೆಗಿಳಿದ ನೂರಾರು ಬಿಜೆಪಿ ಕಾರ್ಯಕರ್ತರು ರಸ್ತೆ ಅಡ್ಡಗಟ್ಟಿ ಮುಂದಿನ ಶುಕ್ರವಾರದ ತನಕ ನಾವು ಹೀಗೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಹೌರ ಜಿಲ್ಲಾ ಯುವ ಮೋರ್ಚಾದ ಕಾರ್ಯಕರ್ತ ಒ.ಪಿ ಸಿಂಗ್ ಅವರು, ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ಗ್ರ್ಯಾಂಡ್ ಟ್ರಾಂಕ್ ರಸ್ತೆ ಮತ್ತು ಇತರ ಮುಖ್ಯ ರಸ್ತೆಗಳಲ್ಲಿ ಶುಕ್ರವಾರ ಸಂಚಾರ ನಿಷೇಧಿಸಲಾಗಿದೆ. ಇದರಿಂದ ಸರಿಯಾದ ಸಮಯಕ್ಕೆ ರೋಗಿಗಳು ಆಸ್ಪತ್ರೆಗೆ ಹೋಗಲು ಆಗದೇ ಮೃತಪಡುತ್ತಿದ್ದಾರೆ. ಉದ್ಯೋಗಸ್ಥರು ಶುಕ್ರವಾರ ಸರಿಯಾದ ಸಮಯಕ್ಕೆ ಕಚೇರಿಗೆ ಹೋಗಲು ಆಗುತ್ತಿಲ್ಲ. ನಮಾಜ್ ವೇಳೆ ರಸ್ತೆಗಳ ನಿಷೇಧವನ್ನು ಎಲ್ಲಿಯವರೆಗೆ ಮುಂದುವರಿಸುತ್ತಾರೋ ಅಲ್ಲಿಯವರೆಗೆ ನಾವೂ ಹನುಮಾನ್ ಮಂದಿರಗಳ ಮುಂದೆ ಎಲ್ಲಾ ರಸ್ತೆಗಳನ್ನು ತಡೆದು ಹನುಮಾನ್ ಚಾಲಿಸಾವನ್ನು ಪಠಣ ಮಾಡುತ್ತೇವೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *