ನಮಗೆ ಹೆಚ್ಚು ಶಕ್ತಿಕೊಡಿ ಅಂತ ಬೇಡಿಕೊಂಡು ಹೋಗಲ್ಲ- ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ

ಉಡುಪಿ: ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿ ಎಂದು ನಾನು ಯಾರಲ್ಲಿಯೂ ಬೇಡಿಕೊಂಡು ಹೋಗಲ್ಲ. ಸರ್ಕಾರದವರಿಗೆ ಲೋಕಾಯುಕ್ತ ಬಲಪಡಿಸಬೇಕೆಂದಿದ್ದರೆ ಆ ಕೆಲಸ ಮಾಡ್ತಾರೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಲೋಕಾಯುಕ್ತರು ಭೇಟಿ ನೀಡಿ ವೈದ್ಯರು, ರೋಗಿಗಳ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನನ್ನ ಸಾಮರ್ಥ್ಯಕ್ಕೆ ಮೀರಿ ಕೆಲಸ ಮಾಡುತ್ತಿದ್ದೇನೆ. ಈ ವಿಚಾರ ಕೋರ್ಟ್ ನಲ್ಲಿ ತೀರ್ಪಿಗೆ ಸಿದ್ಧವಾಗಿದೆ. ನಮ್ಮ ಅಭಿಪ್ರಾಯವನ್ನು ವಕೀಲರ ಮೂಲಕ ಕೋರ್ಟಿಗೆ ಮನವರಿಕೆ ಮಾಡಲಾಗಿದೆ. ಅದನ್ನೆಲ್ಲಾ ಮಾಧ್ಯಮಗಳ ಮುಂದೆ ಹಂಚಿಕೊಳ್ಳಲ್ಲ ಅಂತ ಹೇಳಿದರು.

ನಾನಿನ್ನೂ ಸಂಪೂರ್ಣ ಗುಣಮುಖವಾಗಿಲ್ಲ:
ಲೋಕಯುಕ್ತ ಸಂಸ್ಥೆ ರಾಜ್ಯದಲ್ಲಿ ಖಾಲಿಯಾಗಿದೆ ಎಂಬ ಭಾವನೆ ಜನರಿಗೆ ಬರಬಾರದು ಎಂಬ ಉದ್ದೇಶದಿಂದ ಸಂಪೂರ್ಣ ಗುಣಮುಖ ಆಗುವ ಮೊದಲೇ ಕೆಲಸ ಶುರು ಮಾಡಿದ್ದೇನೆ. ದೇಶದಲ್ಲಿ ಬಡವರ್ಗಕ್ಕೆ ಉತ್ತಮ ಆರೋಗ್ಯ ಸಿಗಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತೇನೆ. ಉಡುಪಿ ಸರ್ಕಾರಿ ಆಸ್ಪತ್ರೆ ಭೇಟಿ ಕೊಟ್ಟಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯ ಪೀಡಿತರು ಬಂದಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಮಾಧ್ಯಮಗಳು ಅಪಪ್ರಚಾರ ಮಾಡುವುದು ಸರಿಯಲ್ಲ. ಆಸ್ಪತ್ರೆಗಳ ಸುಧಾರಣೆಗೆ ಅವುಗಳೂ ಶ್ರಮಿಸಬೇಕು. ಉಡುಪಿಯಲ್ಲಿ ಮೂಲಭೂತ ವ್ಯವಸ್ಥೆ ಕೊರತೆಯಿದೆ. ಸಿಬ್ಬಂದಿ ಕೊರತೆ ಎದ್ದು ಕಾಣುತ್ತದೆ ಎಂದರು.

1962 ರಲ್ಲಿ ಈ ಆಸ್ಪತ್ರೆ ಉದ್ಘಾಟನೆ ಆಗಿದೆ. 55 ವರ್ಷದಲ್ಲಿ ಆಗಬೇಕಾದ ಬೆಳವಣಿಗೆ ಆಗಿಲ್ಲ. ವೈದ್ಯರು, ರೋಗಿಗಳ ಜೊತೆ ಮಾತನಾಡಿ ಹಲವಾರು ಅಂಶಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಯ ವ್ಯವಸ್ಥೆಗಳ ಬಗ್ಗೆ ತನಿಖೆ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *