ಸಂಸದರಿಗೆ ಟಿಕೆಟ್ ಕೈ ತಪ್ಪೋ ಆತಂಕ-‘ We Want Pratap Simha’ ಎಂದ ಸಾರ್ವಜನಿಕರು

ಮೈಸೂರು: ಸಂಸದ ಪ್ರತಾಪ್ ಸಿಂಹಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳು ಇರುವುದರಿಂದ ಇದೀಗ ಅವರ ಬೆನ್ನಿಗೆ ಸಾರ್ವಜನಿಕರು ನಿಂತಿದ್ದಾರೆ.

ಪ್ರತಾಪ್ ಸಿಂಹರಿಗೆ ಟಿಕೆಟ್ ಮಿಸ್ ಆಗುತ್ತೆ ಅಂತ ಚರ್ಚೆ ಶುರುವಾದ ಬೆನ್ನಲ್ಲಿಯೇ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ನಡೆಸಲಾಗುತ್ತಿದೆ. ಸೈದ್ದಾಂತಿಕವಾಗಿ ವಿರೋಧಿಸಿದವರು ಕೂಡ ಪ್ರತಾಪ್ ಸಿಂಹ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಮೈಸೂರು ಟಿಕೆಟ್ ಪ್ರತಾಪ್ ಸಿಂಹಗೆ ಕೊಡುವಂತೆ ಆಗ್ರಹಿಸಲಾಗುತ್ತಿದೆ. ಇದನ್ನೂ ಓದಿ: ತಾಪ್‌ ಸಿಂಹಗೆ ಟಿಕೆಟ್‌ ಸಿಗೋದು ಅನುಮಾನ – ಮೈಸೂರಿನಿಂದ ಯದುವೀರ್‌ ಸ್ಪರ್ಧೆ?

ಪ್ರತಾಪ್ ಸಿಂಹರಿಗೆ (Pratap Simha) ಟಿಕೆಟ್ ಕೊಡದಿದ್ದರೆ ಹೋರಾಟದ ಜೊತೆಗೆ ನೋಟ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ. ಕೆಲವರು ಮತ್ತೊಮ್ಮೆ ಪ್ರತಾಪ್ ಸಿಂಹ ಎಂದರೆ, ಇನ್ನೂ ಕೆಲವರು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಬಗ್ಗೆಯೂ ಪೋಸ್ಟ್‍ನಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಹಿ ಸಂಗ್ರಹ ಅಭಿಯಾನ ಮಾಡಲಾಗುತ್ತಿದ್ದು, ‘ವಿ ವಾಂಟ್ ಪ್ರತಾಪ್ ಸಿಂಹ’ ಎಂದು ಟ್ರೆಂಡ್ ಸೃಷ್ಟಿಸಲಾಗಿದೆ. ಪ್ರತಾಪ್ ಸಿಂಹ ಕೊಡುಗೆಗಳ ಪಟ್ಟಿ ನೀಡಿ ಟಿಕೆಟ್ ಕೊಡಿ ಅಂತ ಒತ್ತಾಯಿಸಲಾಗುತ್ತಿದೆ.

ಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಿಜೆಪಿ ಹೈಕಮಾಂಡ್‌ (BJP High Command) ಮೈಸೂರಿನಲ್ಲಿ (Mysuru) ಈ ಬಾರಿ ಯದುವೀರ್‌ ಒಡೆಯರ್‌ (Yaduveer Wadiyar) ಅವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ. ಕಳೆದ ಕೆಲ ದಿನಗಳಿಂದ ಯದುವೀರ್‌ ಒಡೆಯರ್‌ ಹೆಸರು ಕೇಳಿ ಬರುತ್ತಿದ್ದರೂ ಅದು ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ಆಗಿರಲಿಲ್ಲ. ಆದರೆ ಈಗ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಯದುವೀರ್‌ ಒಡೆಯರ್‌ ಹೆಸರು ಪ್ರಸ್ತಾಪವಾಗಿದೆ.