ಉಪಚುನಾವಣೆಯಲ್ಲಿ ಸೋತಿದ್ದೇವೆ, ಇವಿಎಂ ಹ್ಯಾಕ್ ಮಾಡಿದ್ದಾರೆ ಎನ್ನಲ್ಲ: ಜೋಶಿ

ಧಾರವಾಡ: ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ (By Election) ನಾವು ಸೋಲು ಕಂಡಿದ್ದೇವೆ. ಸಹಜವಾಗಿ ಆಡಳಿತ ಪಕ್ಷದ ಅಭ್ಯರ್ಥಿಗಳು ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ. ಈಗ ನಾವು ಸೋತಿದ್ದೇವೆ ಎಂದು ಕಾಂಗ್ರೆಸ್‌ನವರ ರೀತಿ ಇವಿಎಂ (EVM) ಹ್ಯಾಕ್ ಆಗಿದೆ ಎನ್ನುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದರು.

ಈ ಕುರಿತು ಧಾರವಾಡದಲ್ಲಿ (Dharwad) ಮಾತನಾಡಿದ ಅವರು, ಶಿಗ್ಗಾಂವಿಯಲ್ಲಿ (Shiggaon) ನಾವು ಗೆಲ್ಲುತ್ತೇವೆ ಎಂಬ ಭರವಸೆ ಇತ್ತು. ಆದರೆ ಅಲ್ಲಿ ಏನು ತಪ್ಪಾಗಿದೆ ಎಂಬುದರ ಬಗ್ಗೆ ಪರಾಮರ್ಶೆ ಮಾಡುತ್ತೇವೆ. ಉಪಚುನಾವಣೆಯಲ್ಲಿ ಜನ ಸಹಜವಾಗಿಯೇ ಆಡಳಿತ ಪಕ್ಷದ ಪರವಾಗಿ ಇರುತ್ತಾರೆ. ಆಡಳಿತ ಪಕ್ಷದ ಅಭ್ಯರ್ಥಿಯೇ ಗೆದ್ದರೆ ಅನುಕೂಲ ಎಂಬುದು ಸಾಮಾನ್ಯ. ಶಿಗ್ಗಾಂವಿಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಕಾಂಗ್ರೆಸ್‌ನಿಂದ ಹಣ ಹಂಚಿಕೆಯಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಇವಿಎಂನಲ್ಲಿ ಅಡ್ಜಸ್ಟ್‌ಮೆಂಟ್‌, Give & Take Policy ಮಾಡ್ತಿದ್ದಾರೆ: ಸತೀಶ್‌ ಜಾರಕಿಹೊಳಿ

ಶಿಗ್ಗಾಂವಿಯಲ್ಲಿ 2-3 ಪಂಚಾಯ್ತಿಗೆ ಒಬ್ಬೊಬ್ಬ ಸಚಿವರನ್ನು ನೇಮಕ ಮಾಡಲಾಗಿತ್ತು. ಜನ ತೀರ್ಮಾನ ಮಾಡಿದ್ದರೆ ನಾವು ಗೆಲ್ಲಬಹುದಿತ್ತು. ಇತ್ತೀಚಿಗೆ ಎಲ್ಲಾ ಉಪಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಇಡೀ ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚುತ್ತಿದೆ. ಮಹಾರಾಷ್ಟ್ರದಲ್ಲಿ ವಿಪಕ್ಷ ಆಗಲು ಸಹ ಕಾಂಗ್ರೆಸ್‌ಗೆ ಅವಕಾಶ ಇಲ್ಲದಂತಾಗಿದೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ನವರು ಜೆಎಂಎಂ ಜೊತೆ ಹೋಗಿದ್ದರು. ಎರೆದುಕೊಳ್ಳುವವರ ಪಕ್ಕ ಹೋಗಿ ಡೊಗ್ಗಿ ನಿಲ್ಲಲು ಕಾಂಗ್ರೆಸ್‌ನವರು ಹೋಗಿದ್ದರು. ಅಲ್ಲಿ ಜೆಎಂಎಂ ಹತ್ತು ಸೀಟು ಗೆದ್ದಿದೆ. ಕಾಂಗ್ರೆಸ್ ಯಾರನ್ನು ಹಿಡಿದುಕೊಳ್ಳುತ್ತದೆಯೋ ಅವರನ್ನು ಮುಳುಗಿಸುತ್ತದೆ. ಎಸ್‌ಪಿ ಪಕ್ಷವನ್ನು ಮುಳುಗಿಸಿದರು. ಶರದ್ ಪವಾರ್ ಹಾಗೂ ಉದ್ಧವ್ ಠಾಕ್ರೆಯನ್ನು ಮುಳುಗಿಸಿದರು. ಮತ್ತೊಮ್ಮೆ ರಾಹುಲ್ ಗಾಂಧಿ ಲಾಂಚಿಂಗ್ ಫೇಲ್ ಆಗಿದೆ. 21ನೇ ಸಲ ರಾಹುಲ್ ಗಾಂಧಿ ಲಾಂಚ್ ಆಗಿದ್ದರು. ಹೊಸ ಹೊಸ ಎಂಜಿನ್ ಹಾಕಿ ಹಾರಿಸಿದ್ದರು. ಆದರೆ ಆ ವಿಮಾನ ಕೆಳಗೆ ಬೀಳುತ್ತಿದೆ. ಮತ್ತೊಮ್ಮೆ ರಾಹುಲ್ ಗಾಂಧಿ ವಿಫಲ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದರು. ಇದನ್ನೂ ಓದಿ: ಜನರಿಗಾಗಿ ದುಡಿಯುವ ನಮ್ಮ ಸಂಕಲ್ಪಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ನೀಡಿದೆ: ಸಿಎಂ

ವಕ್ಫ್ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ. ಈಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೂ ವಕ್ಫ್ ಮುಂದುವರೆಸುತ್ತದೆಯಾ? ಏನೇ ಆದರೂ ವಕ್ಫ್ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಯೋಜನೆ, ಟೀಂ ವರ್ಕ್ ಗೆಲುವಿಗೆ ಸಹಕಾರಿಯಾಗಿದೆ – ಅನ್ನಪೂರ್ಣ ತುಕಾರಾಂ