ನಮ್ಮನ್ನು ಸ್ಪೀಕರ್ ಅನರ್ಹ ಮಾಡುತ್ತಾರೆ ಅಂತ ಮೊದಲೇ ಗೊತ್ತಿತ್ತು: ಎಂಟಿಬಿ

– ಮೂರು ದಿನಗಳಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ನಾವು ಅನರ್ಹತೆ ಆಗಲು ಯಾರು ಕಾರಣ ಎನ್ನುವುದನ್ನು ಸದ್ಯದಲ್ಲೇ ಬಹಿರಂಗ ಮಾಡುತ್ತೇನೆ. ಮುಂಬರುವ ಮೂರು ದಿನಗಳಲ್ಲಿ ಸ್ಫೋಟಕ ಮಾಹಿತಿ ನೀಡುತ್ತೇನೆ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶಾಸಕ ಎಂಟಿಬಿ ನಾಗರಾಜು ಹೇಳಿಕೆ ನೀಡಿದ್ದಾರೆ.

ಮುಂಬೈನಿಂದ ಬೆಂಗಳೂರಿಗೆ ವಾಪಸ್ ಬಂದಿರುವ ಕಾಂಗ್ರೆಸ್ ನಾಯಕ ಎಂಟಿಬಿ ನಾಗರಾಜ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ನಮ್ಮ ಮುಖಂಡರೇ ನಮಗೆ ದ್ರೋಹ ಮಾಡಿದರು. ಎಲ್ಲವನ್ನ ಸುದ್ದಿಗೋಷ್ಠಿಯಲ್ಲಿ ತಿಳಿಸುತ್ತೇನೆ. ಅನರ್ಹತೆ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.

ನನ್ನ ಕ್ಷೇತ್ರದ ಜನರ ಹಾಗೂ ಮುಖಂಡರ ತೀರ್ಮಾನದಂತೆ ನನ್ನ ಮುಂದಿನ ನಡೆ ತೆಗೆದುಕೊಳ್ಳುತ್ತೇನೆ. ನಾವು ಅನರ್ಹತೆ ಆಗಲು ಯಾರು ಕಾರಣ ಹಾಗೂ ಇತರೇ ವಿಚಾರಗಳ ಬಗ್ಗೆ ಮುಂಬರುವ ಮೂರು ದಿನಗಳಲ್ಲಿ ಸ್ಫೋಟಕ ಮಾಹಿತಿ ನೀಡುತ್ತೇನೆ ಎಂದು ಕಿಡಿಕಾರಿದರು.

ರಾಜೀನಾಮೆಗೆ ಕಾರಣ ಏನು ಎಂಬುದನ್ನು ಕೂಡ ಹೇಳುತ್ತಾನೆ. ನಾನು ಜನಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಬೇಕಾದಷ್ಟು ಹಣವನ್ನು ಆ ಭಗವಂತನ ಕೊಟ್ಟಿದ್ದಾನೆ. ಅಧಿಕಾರ, ಹಣದ ಆಸೆಗೆ ನಾನು ಪಕ್ಷ ಬಿಟ್ಟಿಲ್ಲ. ನಮ್ಮನ್ನು ಸ್ಪೀಕರ್ ಅನರ್ಹ ಮಾಡುತ್ತಾರೆ ಅಂತ ಮೊದಲೇ ಗೊತ್ತಿತ್ತು. ಈವರೆಗೂ ನಾನು ಯಾವ ಪಕ್ಷವನ್ನೂ ಸೇರಲು ನಿರ್ಧಾರ ಮಾಡಿಲ್ಲ. ಸಮ್ಮಿಶ್ರ ಸರ್ಕಾರದ ಆಡಳಿತಕ್ಕೆ ಬೇಸತ್ತು ರಾಜೀನಾಮೆ ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *