ಪ್ಲೀಸ್, ಶಿವಮೊಗ್ಗ ಟಿಕೆಟ್ ನಮಗೆ ಬೇಡ ಸ್ವಾಮಿ!

-ಬಿಜೆಪಿಗೆ ಎದುರಾಳಿ ಯಾರಾಗ್ತಾರೆ?

ಬೆಂಗಳೂರು: ಚುನಾವಣೆಗೆ ಸ್ಪರ್ಧಿಸಲು ಪಕ್ಷ ಟಿಕೆಟ್ ನೀಡಿದ್ರೆ ಸಾಕು ಅನ್ನುತ್ತಿದ್ದ ಅಭ್ಯರ್ಥಿಗಳು ಈಗ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾವು ನಿಲ್ಲಲ್ಲ ಅನ್ನುತ್ತದ್ದಾರಂತೆ. ಮೈತ್ರಿ ಸರ್ಕಾರದ ನಾಯಕರು ಟಿಕೆಟ್ ನೀಡಲು ಮುಂದಾದ್ರೂ ಸ್ವಾಮಿ ನಮ್ಮನ್ನು ಬಿಟ್ಟುಬಿಡಿ ಅಂತಿದ್ದಾರಂತೆ. ಇತ್ತ ಬಿಜೆಪಿ ಬಿ.ವೈ.ರಾಘವೇಂದ್ರ ಅವರನ್ನು ಶಿವಮೊಗ್ಗದ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

ಕಾಂಗ್ರೆಸ್‍ನಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉಪ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ ಅಂತಾ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಮಂಜುನಾಥ್ ಭಂಡಾರಿ, ಕಿಮ್ಮನೆ ರತ್ನಾಕರ್ ಅವರು ಹೆಸರುಗಳು ಸದ್ಯ ಮುಂಚೂಣಿಯಲ್ಲಿವೆ. ಆದ್ರೆ ಕಾಂಗ್ರೆಸ್ ನಾಯಕರು ಚುನಾವಣೆಗೆ ಸ್ಪರ್ಧಿಗಳು ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಕಾಂಗ್ರೆಸ್ ಮುಂದಾಗುವ ಸಾಧ್ಯತೆಗಳಿವೆ.

ಮೈತ್ರಿ ಸರ್ಕಾರ ಮಾತ್ರ ಇನ್ನು ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿದೆ. ಕೈ ನಾಯಕರು ಜೆಡಿಎಸ್ ನವರು ಸ್ಪರ್ಧೆ ಮಾಡಿದರೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಸ್ವಕ್ಷೇತ್ರದಲ್ಲಿ ಕಟ್ಟಿಹಾಕಬೇಕು ಎಂಬುವುದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮಹದಾಸೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಿಂದಲೇ ಅಭ್ಯರ್ಥಿಗಳನ್ನು ಕಣಕ್ಕೀಳಿಸಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

ಈ ಬಾರಿ ಮಾಜಿ ಸಿಎಂ ದಿ.ಬಂಗಾರಪ್ಪ ಕುಟುಂಬದಿಂದ ಲೋಕಸಭಾ ಉಪಚುನಾವಣೆ ಸ್ಪರ್ಧೆ ಅನುಮಾನವಾಗಿದೆ. ಮಧು ಬಂಗಾರಪ್ಪ ಅಥವಾ ಗೀತಾ ಶಿವರಾಜ್‍ಕುಮಾರ್ ಆಗಲಿ ಸ್ಪರ್ಧೆಗೆ ಆಸಕ್ತಿ ತೋರಿಸುತ್ತಿಲ್ಲ. ಚುನಾವಣೆ ಘೋಷಣೆಗೂ ಮುನ್ನ ಲಂಡನ್ ಪ್ರವಾಸಕ್ಕೆ ತೆರಳಿರುವ ಮಧು ಬಂಗಾರಪ್ಪ ಅಕ್ಟೋಬರ್ 16ರ ನಂತರ ಹಿಂದಿರುಗಲಿದ್ದಾರೆ. ಇತ್ತ ಅಕ್ಟೋಬರ್ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಹೀಗಾಗಿ ಜೆಡಿಎಸ್ ಹೊಸ ಅಭ್ಯರ್ಥಿಯನ್ನು ಚುನಾವಣೆಗೆ ಇಳಿಸುತ್ತಾ ಅಥವಾ ಮಧು ಬಂಗಾರಪ್ಪರನ್ನು ಪ್ರವಾಸ ರದ್ದುಗೊಳಿಸಿ ಹಿಂದಿರುಗಿ ಬರುವಂತೆ ಸೂಚಿಸುತ್ತಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *