ಇವಿಎಂ ಮೇಲೆ ನಮಗೆ ನಂಬಿಕೆ ಇಲ್ಲ, ತನಿಖೆಯಾಗಲಿ – ಮುನಿಯಪ್ಪ

ಕೋಲಾರ: ಇವಿಎಂ ಮೇಲೆ ನಮಗೆ ನಂಬಿಕೆ ಇಲ್ಲ, ತನಿಖೆಯಾಗಬೇಕು ಎಂದು ಸಂಸದ ಕೆ.ಎಚ್ ಮುನಿಯಪ್ಪ ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೇಂದ್ರ ಸರ್ಕಾರ ಧಕ್ಕೆ ತಂದಿದೆ. ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇವಿಎಂ ಮೇಲೆ ನಮಗೆ ನಂಬಿಕೆ ಇಲ್ಲ. ಈ ಕುರಿತು ಚುನಾವಣಾ ಆಯೋಗ ತನಿಖೆ ನಡೆಸಬೇಕು. ಎಲ್ಲಾ ಪ್ರತಿಪಕ್ಷ ನಾಯಕರೂ ಕೂಡ ಇವಿಎಂ ವಿರುದ್ಧ ತನಿಖೆ ನಡೆಸುವಂತೆ ಕೇಳಿಕೊಳ್ಳುತ್ತಿದ್ದಾರೆ ಎಂದು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದರು.

ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಈ ಸಂಬಂಧ ಮನವಿ ಮಾಡಿದ್ದೇವೆ. ಶೇ.50 ರಷ್ಟು ವಿವಿ ಪ್ಯಾಟ್ ಎಣಿಕೆಯಾಗಲಿ ಎಂದು ಕೋರಿದ್ದೇವೆ. ಈ ಹಿಂದೆಯೇ ಎಲ್ಲಾ 17 ವಿರೋಧ ಪಕ್ಷದ ಒಕ್ಕೂಟಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇವೆ. ಮಂಗಳವಾರ ಕೂಡ 21 ಪಕ್ಷಗಳು ಇವಿಎಂ ವಿರುದ್ಧ ತನಿಖೆ ಆಗಬೇಕು ಎಂದು ಮನವಿ ಮಾಡಿದೆ. ಇವಿಎಂ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇಲ್ಲದಾಗಿದೆ. ಬ್ಯಾಲೆಟ್ ಪೇಪರ್ ಮುಖಾಂತರವೇ ಚುನಾವಣೆ ನಡೆಯಬೇಕು ಎಂದು ಕೋರಿದ್ದೇವೆ. ಚುನಾವಣಾ ಆಯೋಗಕ್ಕೆ ಭೇಟಿ ನೀಡಿ, ಶೇ.50 ರಷ್ಟು ವಿವಿ ಪ್ಯಾಟ್ ಎಣಿಕೆಯಾಗಬೇಕು, ಆ ಮುಖಾಂತರ ನಿಜಾಂಶ ಹೊರಬರುತ್ತದೆ ಎಂದು ಹೇಳಿದ್ದೇವೆ. ಆದರೆ ಯಾವುದಕ್ಕೂ ಸರಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಹರಿಹಾಯ್ದರು.

ಈಗ ಬಂದಿರುವುದು ಎಕ್ಸಿಟ್ ಪೋಲ್ ಸಮೀಕ್ಷೆ, ಎಕ್ಸಾಕ್ಟ್ ಪೋಲ್ ಅಲ್ಲ. ಎಕ್ಸಿಟ್ ಪೋಲ್‍ಗೆ ತದ್ವಿರುದ್ಧವಾದ ಫಲಿತಾಂಶ ಈ ಬಾರಿ ದೇಶದಲ್ಲಿ ಬರಲಿದೆ. ರಾಜಸ್ಥಾನ, ಮಧ್ಯಪ್ರದೇಶ ಮುಖ್ಯಸ್ಥರು ಹಾಗೂ ಎಐಸಿಸಿ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಕೋಲಾರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ, ಆದರೆ ಲೀಡ್ ಬಗ್ಗೆ ಮಾತನಾಡಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರು ತಮ್ಮ ನೋವನ್ನ ಹೇಳಿಕೊಂಡಿದ್ದಾರೆ. ಪಕ್ಷ ಇದೆ ಪಕ್ಷದ ನಾಯಕರ ಬಳಿ ತಮ್ಮ ಅಸಮಾಧಾನವನ್ನು ಹೇಳಿಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಮುನಿಯಪ್ಪ ಅವರು ಪ್ರತಿಕ್ರಿಯಿಸಿದರು.

Comments

Leave a Reply

Your email address will not be published. Required fields are marked *