ಇಲ್ಲ ಇಲ್ಲ ಎಂದು ಹೇಳಿ ನಾಚಿಕೊಂಡು ಹೋದ ರೇವತಿ

– ನಾವಿಬ್ಬರು ತುಂಬಾ ಖುಷಿಯಾಗಿದ್ದೀವಿ: ನಿಖಿಲ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರು ಇಂದು ರೇವತಿ ಅವರ ಜೊತೆ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ವೇಳೆ ಮಾತನಾಡಿದ ನಿಖಿಲ್ ಅವರು, ಕುಟುಂಬಸ್ಥರು ನಿಶ್ಚಿತಾರ್ಥ ನಿಗದಿ ಮಾಡಿದ್ದು, ನಾವಿಬ್ಬರು ತುಂಬಾ ಖುಷಿಯಾಗಿದ್ದೀವಿ ಎಂದರು. ಇತ್ತ ರೇವತಿ ಅವರು ಮಾಧ್ಯಮಗಳನ್ನು ನೋಡಿ ಇಲ್ಲ ಇಲ್ಲ ಎಂದು ಹೇಳಿ ನಾಚಿಕೊಂಡು ಕಾರಿನಲ್ಲಿ ಹೋಗಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿಖಿಲ್ ಅವರು, ನನ್ನ ಜೀವನದ ಮೊದಲನೇ ಅಧ್ಯಾಯನವನ್ನು ನಾನು ಇಂದು ಪ್ರಾರಂಭಿಸುತ್ತಿದ್ದೇನೆ. ಎರಡು ಕುಟುಂಬಗಳು ಸೇರಿ ನನ್ನ ನಿಶ್ಚಿತಾರ್ಥವನ್ನು ನಿಗದಿ ಮಾಡಿದ್ದಾರೆ. ನಾವಿಬ್ಬರು ತುಂಬಾ ಖುಷಿಯಾಗಿದ್ದೇವೆ. ಇಬ್ಬರು ಮೊದಲನೇ ಹೆಜ್ಜೆ ಇಡುತ್ತಿದ್ದೇವೆ. ಹಾಗಾಗಿ ನಮಗೆ ರಾಜ್ಯದ ಜನತೆಯ ಆಶೀರ್ವಾದ ಕೂಡ ಬೇಕಾಗಿದೆ ಎಂದು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ನನ್ನ ಮೇಲಿನ ನಿಮ್ಮ ಪ್ರೀತಿ, ಹಾರೈಕೆಗಳು ಇನ್ನು ಮುಂದೆ ನಮ್ಮಿಬ್ಬರ ಮೇಲಿರಲಿ: ನಿಖಿಲ್

ಇದೇ ವೇಳೆ ರಾಜಕೀಯ ಬೇರೆ, ವೈಯಕ್ತಿಕ ಜೀವನ ಬೇರೆ. ನನ್ನ ತಂದೆ ಪಕ್ಷಾತೀತವಾಗಿ ಹಲವಾರು ಗಣ್ಯರಿಗೆ ನಿಶ್ಚಿತಾರ್ಥಕ್ಕೆ ಆಹ್ವಾನಿಸಿದ್ದಾನೆ. ನಾನು ಚಿತ್ರರಂಗದಲ್ಲಿ ಮೂರು ಸಿನಿಮಾಗಳು ಮಾಡಿದ್ದು, ನಾನೇ ಕೆಲವರಿಗೆ ಸ್ವತಃ ಆಹ್ವಾನಿಸಿದೆ. ನಮ್ಮ ಸಂಪ್ರದಾಯದ ಪ್ರಕಾರ ನಾವು ಮದುವೆ ಮಾಡಿಕೊಳ್ಳುತ್ತಿದ್ದೇವೆ. ಕಳೆದ 10 ದಿನಗಳಿಂದ ರೇವತಿ ಅವರು ಪ್ರೀ ವೆಡ್ಡಿಂಗ್ ಶೂಟ್ ಹಾಗೂ ಸಂಗೀತ ಕಾರ್ಯಕ್ರಮ ಬೇಡ ಎಂದು ಹೇಳಿದ್ದಾರೆ. ಶಾಸ್ತ್ರ ಬದ್ಧವಾಗಿ ಮದುವೆ ಆಗೋಣ ಎಂದು ಹೇಳುತ್ತಿದ್ದಾರೆ ಎಂದು ನಿಖಿಲ್ ಹೇಳಿದರು.

ಏಪ್ರಿಲ್ 17ಕ್ಕೆ ಮದುವೆ ದಿನ ನಿಗದಿಯಾಗಿದೆ. ನಮ್ಮ ತಾತನ ಕನಸಿನಂತೆ ರಾಮನಗರ ಜಿಲ್ಲೆಯಲ್ಲಿ ಮದುವೆ ನಡೆಯಲಿದೆ. ನಮ್ಮನ್ನು ಪ್ರೀತಿಸುವ ವರ್ಗ ಎಲ್ಲರಿಗೂ ಮದುವೆ ಆಹ್ವಾನ ನೀಡಲಾಗುತ್ತೆ ಎಂದರು. ಇದೇ ವೇಳೆ, 10 ದಿನದಲ್ಲಿ ನಾನು ರೇವತಿ ಅವರ ಜೊತೆ ತುಂಬಾ ಮಾತನಾಡಿದ್ದೇನೆ. ನಮ್ಮ ಮುಂದಿನ ಜೀವನ ಹೇಗೆ ಇರಬೇಕು ಎಂಬುದು ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ ಎಂದು ನಿಖಿಲ್ ತಿಳಿಸಿದರು.

Comments

Leave a Reply

Your email address will not be published. Required fields are marked *