ಅಣ್ಣ ಬಂಡೀಪುರದಲ್ಲಿ ಫ್ಲೈಓವರ್ ಬಗ್ಗೆ ಮಾತನಾಡಿದ್ರೆ, ತಮ್ಮ ಇಲ್ಲ ಅಂದ್ರು!

ಬೆಂಗಳೂರು: ಬಂಡೀಪುರದಲ್ಲಿ ಫ್ಲೈ ಓವರ್ ರಸ್ತೆ ನಿರ್ಮಾಣದ ಕುರಿತು ಚಿಂತನೆ ನಡೆದಿದೆ ಎಂದು ಸಚಿವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅದು ಸುಳ್ಳು, ಸುಮ್ಮನೆ ಈ ಕುರಿತು ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಬಂಡೀಪುರದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ಆದರೂ ಏಕೆ ಫ್ಲೈ ಓವರ್ ರಸ್ತೆ ನಿರ್ಮಾಣದ ಕುರಿತು ಸುಮ್ಮನೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ರಾತ್ರಿ ವೇಳೆ ರಸ್ತೆ ಸಂಚಾರ ಪುನರಾರಂಭಕ್ಕೆ ಅವಕಾಶ ನೀಡುವುದು ಹಾಗೂ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಫ್ಲೈ ಓವರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಎನ್ನುವುದು ಸುಳ್ಳು ಮಾಹಿತಿ ಎಂದು ಹೇಳಿದರು.

ರೇವಣ್ಣ ಹೇಳಿದ್ದು ಏನು?
ಬಂಡೀಪುರ ರಕ್ಷಿತಾರಣ್ಯದಲ್ಲಿ ರಾತ್ರಿ ವಾಹನ ಸಂಚಾರ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಗುರುವಾರ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಸಚಿವ ರೇವಣ್ಣ, ಈ ಕುರಿತು ಕೇರಳ ಸರ್ಕಾರ ಸುಪ್ರೀಂಗೆ ಹೋಗಿದೆ. ಅದನ್ನು ಗಮನದಲ್ಲಿಟ್ಟು ಇದರ ಕುರಿತು ಸೂಕ್ತವಾಗಿ ಕ್ರಮ ಕೈಗೊಳ್ಳುತ್ತೇವೆ. ಬಂಡೀಪುರ ಅರಣ್ಯದಲ್ಲಿಯೂ ಕೆಲವೆಡೆಗಳಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಕಾಡು ಪ್ರಾಣಿಗಳ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಕಾಮಗಾರಿ ಮಾಡುವ ಕುರಿತು ಚರ್ಚಿಸಲಾಗುವುದು. ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ಮುಖ್ಯ ಕಾರ್ಯದರ್ಶಿ ಜೊತೆ ಈ ಕುರಿತು ಸಭೆಯ ನಂತರ ಓಡಾಟದ ಬಗ್ಗೆ ತೀರ್ಮಾನ ಮಾಡಲಾಗುವುದು ಅಂತ ಅವರು ತಿಳಿಸಿದ್ದರು. ಇದನ್ನು ಓದಿ: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅನುಮತಿ- ಕೇರಳದ ಲಾಬಿಗೆ ಮಣಿದ್ರಾ ಸಿಎಂ? ಏನಿದು ವಿವಾದ?

ಬಂಡೀಪುರದಲ್ಲಿ ರಾತ್ರಿ 9 ಗಂಟೆಗೆ 6 ವಾಹನ ಸಂಚಾರ ನಿಷೇಧಿಸಲಾಗಿದ್ದು, ಜುಲೈ 18ರಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಜೊತೆ ನಡೆದ ಸಭೆಯ ವೇಳೆ ಸಿಎಂ ಹಾಗೂ ಸಚಿವ ರೇವಣ್ಣ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಮತ್ತು ಸಾರಿಗೆ ಕಾರ್ಯದರ್ಶಿ ವೈ.ಎಸ್ ಮಲ್ಲಿಕ್ ಜು.21 ರಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪ್ರಕರಣ ಈಗ ಸುಪ್ರೀಂಕೋರ್ಟ್‍ನಲ್ಲಿದ್ದರೂ ಅನುಮತಿ ನೀಡಿರುವುದು ಎಷ್ಟು ಸರಿ ಎಂದು ವನ್ಯಜೀವಿ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *