ಸಾಹಸಸಿಂಹನ ಸಮಾಧಿ ವಿಚಾರದಲ್ಲಿ ನಾವು ಅಸಹಾಯಕರು – ಡಾ. ಜಯಮಾಲಾ

ಉಡುಪಿ: ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ವಿಚಾರದಲ್ಲಿ ನಾವು ಅಸಹಾಯಕರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಒಪ್ಪಿಕೊಂಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಿ ವಿಷ್ಣುವರ್ಧನ್ ಅವರ ಬೇಸರ ಸಹಜವಾದದ್ದು. ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ಒಂಬತ್ತು ವರ್ಷಗಳಾಗಿದೆ. ಭಾರತಿ ಅವರ ಕುಟುಂಬಕ್ಕೆ ನಾನು ಬೆಲೆ ಕೊಡುತ್ತೇನೆ. ಮೈಸೂರಿನಲ್ಲಿ ಸ್ಮಾರಕ ಆಗಬೇಕೆಂದು ಭಾರತಿ ಕೇಳುತ್ತಿದ್ದಾರೆ. ಏಕೆಂದರೆ ಮೈಸೂರು ಅಂದರೆ ವಿಷ್ಣುವರ್ಧನ್ ಅವರಿಗೆ ಪಂಚ ಪ್ರಾಣ. ಅಲ್ಲದೇ ವಿಷ್ಣು ಅವರ ಆಸೆ ಏನು ಎಂಬುದು ಅವರ ಕುಟುಂಬಕ್ಕೆ ಮಾತ್ರ ಗೊತ್ತಿರುತ್ತದೆ. ಅಲ್ಲದೇ ತನ್ನ ಆಸೆ ಏನು ಎಂಬುದನ್ನು ವಿಷ್ಣುವರ್ಧನ್ ಬದುಕಿದ್ದಾಗ ಕುಟುಂಬದವರಲ್ಲಿ ಹೇಳಿರುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಹ ಸಿನೆಮಾ ರಂಗದವರೇ. ಹೀಗಾಗಿ ವಿಷ್ಣು ಸ್ಮಾರಕ ವಿಚಾರಕ್ಕೆ ಯಾವುದೇ ಭಿನ್ನಾಭಿಪ್ರಾಯ ಬರಲ್ಲ. ಭೂಮಿಗೆ ಸಂಬಂಧಪಟ್ಟ ಸಣ್ಣ ತಕರಾರು ಇದೆ. ಗುರುವಾರ ಮುನಿರತ್ನ ಹಾಗೂ ಮಂಜು ಚರ್ಚೆ ನಡೆಸಿ, ಸಂಧಾನ ಮಾಡಿದ್ದಾರೆ. ಈ ಬಗ್ಗೆ ಖುದ್ದು ಪತ್ರದ ಮುಖಾಂತರ ಭಾರತಿ ಅವರಿಗೂ ವಿಚಾರ ತಿಳಿಸಿದ್ದಾರೆ ಎಂದರು.

ವಿಷ್ಣು ಸಮಾಧಿ ವಿಚಾರದಲ್ಲಿ ನಮಗೆಲ್ಲರಿಗೂ ಅಸಹಾಯಕತೆ ಇದೆ. ಎಲ್ಲಿ ಸ್ಮಾರಕ ಮಾಡಲು ಹೋದರೂ, ಒಂದು ವಿವಾದ ಆಗುತ್ತಿದೆ. ರಾಜ್ಯದಲ್ಲಿ ಯಾಕೆ ಹೀಗಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಏನೇ ಆದರೂ ನಾವೆಲ್ಲರೂ ಭಾರತಿ ವಿಷ್ಣುವರ್ಧನ್ ಅವರ ಪರ ನಿಲ್ಲುತ್ತೇವೆಂದು ತಿಳಿಸಿದರು.

ಅಂಬರಿಶ್ ಒಬ್ಬ ಮಹಾನ್ ನಾಯಕ. ನಿಜವಾದ ನಾಯಕ, ಜನರ ಹೃದಯದಲ್ಲಿ ವಾಸ ಮಾಡಿದ ನಟ ಅಂಬರೀಷ್ ಸ್ಮಾರಕಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.

ಇದೇ ವೇಳೆ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಮುಂಬೈ ಗೆ ತೆರಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹೋಗೋರು ಹೋಗ್ತಾ ಇರ್ತಾರೆ ಸಾರ್, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಭದ್ರವಾಗಿದೆ. ಅಸಮಾಧಾನವೆಂಬುದು ಎಲ್ಲಾ ಸುಳ್ಳು ಇದೊಂದು ಅಪಪ್ರಚಾರ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *