ಕೊಪ್ಪಳದಲ್ಲಿ ಕುಡಿಯುವ ನೀರಿಗೆ ಖದೀಮರ ಕನ್ನ – ಕಾಲುವೆಗೆ ಮೋಟಾರಿಟ್ಟು ಕದೀತಾರೆ ಜೀವಜಲ

– ಖಾಕಿ, ನಿಷೇಧಾಜ್ಞೆ ನಡುವೆಯೂ ಪ್ರಭಾವಿಗಳದ್ದೇ ಆಟ

ಕೊಪ್ಪಳ: ನೀರಿನ ಅಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೊಪ್ಪಳ, ರಾಯಚೂರಿಗೆ ನೀರು ಹರಿಸುವ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಯ ಮೂಲಕ ಪ್ರತಿ ದಿನ 1 ಸಾವಿರ ನೀರು ಕ್ಯೂಸೆಕ್ ಹರಿಸಲು ತುಂಗಭದ್ರಾ ಮಂಡಳಿ ತೀರ್ಮಾನಿಸಿದೆ.

ಆದ್ರೆ ಕುಡಿಯುವ ನೀರು ಎಲ್ಲಿಗೆ ಸೇರಬೇಕಿತ್ತೋ ಅಲ್ಲಿಗೆ ಸೇರುತ್ತಿಲ್ಲ. ಕಾರಣ ಮುಖ್ಯಕಾಲುವೆಯ ಒಳಗಿನಿಂದಲೇ ಬೋಗಾ ಕೊರೆದು ಮೋಟಾರ್ ಅಳವಡಿಸಿ ನೀರು ಕದಿಯುತ್ತಿದ್ದಾರೆ. ಮೋಟಾರ್‍ಗಳನ್ನು ಕಲ್ಲು, ಗೋಣಿಚೀಲದಿಂದ ಮುಚ್ಚಿದ್ದಾರೆ. ಕಾಲುವೆಯುದ್ದಕ್ಕೂ ಕನ್ನ ಕೊರೆದು ಸಾಲಾಗಿ ಮೋಟಾರ್‍ಗಳನ್ನಿಟ್ಟು ನೀರು ದೋಚ್ತಿದ್ದಾರೆ.

ಕುಡಿಯುವ ಉದ್ದೇಶಕ್ಕಾಗಿ ಬಿಟ್ಟಿರುವ ನೀರನ್ನು ಕೃಷಿಗೆ ಬಳಸದಂತೆ ಸರ್ಕಾರವೇ ನಿರ್ಬಂಧ ಹೇರಲಾಗಿದೆ. ಕಾಲುವೆ ಮೇಲೆ ನಿಷೇಧಾಜ್ಞೆ ವಿಧಿಸಲಾಗಿದ್ದು ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಆದರೂ ನೀರು ಕದ್ದು ಸ್ಥಳೀಯ ಪ್ರಭಾವಿಗಳು ಭತ್ತ ಬೆಳೆಯುತ್ತಿದ್ದಾರೆ. ಅಂತಾ ಪೊಲೀಸ್ ವರಿಷ್ಠಾಧಿಕಾರಿ ಡಾ.ತ್ಯಾಗರಾಜನ್ ಹೇಳಿದ್ದಾರೆ.

ನೀರು ಬಿಟ್ರೂ ಯಾರಿಗೂ ಕೂಡ ನೀರು ಸಿಕ್ತಾ ಇಲ್ಲ. ದೊಡ್ಡ ಅಧಿಕಾರಿಗಳು ಹಾಗೂ ರೈತರು ಎಲ್ಲರು ಪೈಪ್ ಹಾಕಿ ಬೋರ್ ವೆಲ್‍ನಿಂದ ನೀರು ಕದಿಯುತ್ತಾರೆ. ಇದಕ್ಕೆ ರಾಜಕೀಯ ಮುಖಂಡರ ಕೈವಾಡವಿದೆ. ಇದರಿಂದ ರೈತರಿಗೆ ಕುಡಿಯೋದಕ್ಕೆ ನೀರು ಇಲ್ಲದೇ ತುಂಬಾ ತೊಂದರೆಯಾಗುತ್ತಿದೆ ಅಂತಾ ಕಾಲುವೆ ಕೆಳಭಾಗದ ರೈತ ಭೀಮಣ್ಣ ಹೂಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳದ ಕೊನೆ ಭಾಗ ಮತ್ತು ರಾಯಚೂರು ಮಂದಿಗೆ ತುಂಗೆ ಮರೀಚಿಕೆಯಾಗಿದ್ದಾಳೆ. ಈಗಾಲಾದ್ರೂ ಜಿಲ್ಲಾಡಳಿತ ಮತ್ತು ಜಲಸಂಪನ್ಮೂಲ ಇಲಾಖೆಗೆ ಜ್ಞಾನೋದಯವಾಗಲಿ.

Comments

Leave a Reply

Your email address will not be published. Required fields are marked *