ಕೆರೆಗಳಿಗೆ ಹರಿದ ಜೀವನದಿ ಕಾವೇರಿ ನೀರು-ರೈತರು ಕಬ್ಬು, ಭತ್ತ ಬೆಳೆಯದಂತೆ ಫರ್ಮಾನು!

ಮಂಡ್ಯ: ಇಂದಿನಿಂದ ಕಾವೇರಿಕೊಳ್ಳದಲ್ಲಿರುವ ಕೆರೆಗಳಿಗೆ ಕಾವೇರಿ ನೀರು ಹರಿಯಲಿದೆ. ಅಂದರೆ ಕೆಆರ್‍ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಡ್ಯಾಂನಲ್ಲಿರುವ ನೀರನ್ನು ಹರಿಸಿ ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ.

ಬುಧವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಂಡ್ಯ ಭಾಗದ ಶಾಸಕರು, ಸಂಸದರು, ಜನಪ್ರತಿನಿಧಿಗಳ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾವೇರಿಯ ನಾಲ್ಕೂ ಡ್ಯಾಮ್‍ಗಳಿಂದ ಕೆರೆ-ಕಟ್ಟೆಗಳಿಗೆ ರಾತ್ರಿಯಿಂದಲೇ 15 ದಿನ ನೀರು ಹರಿಯಲಿದೆ ಅಂತಾ ಸರ್ಕಾರ ಘೋಷಿಸಿದೆ. ಆದ್ರೆ ಕೆರೆಗಳಿಗೆ ತುಂಬುವ ನೀರನ್ನು ಕುಡಿಯುವ ಮತ್ತು ಜಾನುವಾರುಗಳಿಗೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಮಾತ್ರ ಬಳಕೆ ಮಾಡಲಾಗುತ್ತದೆ ಅಂತಾ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ನೀರು ಬಿಟ್ಟ ಮಾತ್ರಕ್ಕೆ ಕಾವೇರಿಕೊಳ್ಳದ ರೈತರು ಭತ್ತ ಮತ್ತು ಕಬ್ಬು ಬೆಳೆಯಬಾರದು ಅಂತಾ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಮುಂಗಾರು ಕೊರತೆ ಹಿನ್ನೆಲೆಯಲ್ಲಿ ಮುಂದಿನ ವಾರದಿಂದ ಮೋಡ ಬಿತ್ತನೆ ಮಾಡ್ತೀವಿ ಅಂತಾ ಸಿಎಂ ಹೇಳಿದ್ದಾರೆ.

ಕಾವೇರಿಗೆ ಬಾಗಿನ: ಕೆಆರ್‍ಎಸ್ ಅಣೆಕಟ್ಟೆಯಿಂದ ಮಧ್ಯರಾತ್ರಿಯಿಂದಲೇ ನಾಲೆಗಳಿಗೆ ನೀರು ಹರಿಸಿದ್ರಿಂದ ಹೋರಾಟಗಾರರು ಕಾವೇರಿ ನೀರಿಗೆ ಬಾಗಿನ ಅರ್ಪಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿಗೆ ನಿರಂತರವಾಗಿ ಕೆಆರ್‍ಎಸ್ ನೀರು ಹರಿಸುತ್ತಿದ್ದ ರಾಜ್ಯ ಸರ್ಕಾರ ರೈತರ ಬೆಳೆಗೆ ನೀರು ನೀಡಿರಲಿಲ್ಲ.

ವಸ್ತುಸ್ಥಿತಿ ಅರಿತಿದ್ದ ರೈತರು ನಮ್ಮ ಬೆಳೆಗೆ ನೀರು ಬೇಡ, ನಾಲೆಗಳ ಮುಖಾಂತರ ನೀರು ಹರಿಸಿ ಕೆರೆಕಟ್ಟೆನಾದ್ರು ತುಂಬಿಸಿ. ಆ ಮೂಲಕ ಜನ, ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸಿ ಎಂದು ಸರ್ಕಾರದ ವಿರುದ್ಧ ತಿಂಗಳಾನುಗಟ್ಟಲೆ ಪ್ರತಿಭಟನೆ ನಡೆಸಿದ್ರು. ಕಸ್ತೂರಿ ಕರ್ನಾಟಕ ಜನಪರವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಮಂಡ್ಯದ ಎಲ್ಲ ಕೆರೆಕಟ್ಟೆ ತುಂಬಿಸುವಂತೆ ಮದ್ದೂರಮ್ಮ ಕೆರೆಯಲ್ಲಿ ಕಳೆದೊಂದು ತಿಂಗಳಿಂದ ನಿರಂತವಾಗಿ ಅಹೋರಾತ್ರಿ ಧರಣಿ ನಡೆಸಲಾಗಿತ್ತು.

ರೈತರು, ಕನ್ನಡಪರ ಹೋರಾಟಗಾರರ ಬೇಡಿಕೆಗೆ ಮಣಿದ ಸರ್ಕಾರ ಕೊನೆಗೂ ಮಧ್ಯರಾತ್ರಿಯಿಂದಲೇ ಕೆಆರ್‍ಎಸ್ ಅಚ್ಚುಕಟ್ಟು ವ್ಯಾಪ್ತಿಯ ವಿಶ್ವೇಶ್ವರಯ್ಯ, ವಿರಿಜಾ, ಚಿಕ್ಕದೇವರಾಯ, ವರುಣ, ಆರ್‍ಬಿಎಲ್‍ಎಲ್ ನಾಲೆಗಳಿಗೆ ನೀರು ಹರಿಸಿದೆ. ನೀರನ್ನು ಖುಷಿಯಿಂದ ಸ್ವಾಗತ ಮಾಡಿದ ಕಸ್ತೂರಿ ಕರ್ನಾಟಕ ಜನಪರವೇದಿಕೆ ಕಾರ್ಯಕರ್ತರು, ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪಾಂಡವಪುರ ತಾಲೂಕಿನ ಕಟ್ಟೇರಿ ಸಮೀಪ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ವಿಸಿ ನಾಲೆಗೆ ಬಾಗಿನ ಅರ್ಪಿಸಿ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

 

 

Comments

Leave a Reply

Your email address will not be published. Required fields are marked *