ನೀರು ನಿರ್ವಹಣೆ – 5ಕ್ಕೆ ಜಾರಿದ ಕರ್ನಾಟಕ, ಗುಜರಾತ್‍ಗೆ ಮೊದಲ ಸ್ಥಾನ

ನವದೆಹಲಿ: 2017-18ನೇ ಸಾಲಿನ ಸಂಯೋಜಿತ ನೀರು ನಿರ್ವಹಣೆ ಸೂಚ್ಯಂಕ(ಸಿಡಬ್ಲ್ಯೂಎಂಐ 2.0) ವರದಿ ಬಿಡುಗಡೆಯಾಗಿದ್ದು, ಗುಜರಾತ್ ಪ್ರಥಮ ಸ್ಥಾನ ಪಡೆದರೆ, ಕರ್ನಾಟಕ 5ನೇ ಸ್ಥಾನ ಪಡೆದಿದೆ.

ವರದಿಯನ್ನು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಬಿಡುಗಡೆ ಮಾಡಿದ್ದು, ಶೇ.80ರಷ್ಟು ರಾಜ್ಯಗಳಲ್ಲಿ ನೀರಿನ ನಿರ್ವಹಣೆ ಕುರಿತು ಅಧ್ಯಯನ ನಡೆಸಿ ಈ ವರದಿ ತಯಾರಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ನೀರಿನ ನಿರ್ವಹಣೆಯಲ್ಲಿ ಬೆಳವಣಿಗೆ ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಳೆದ ಬಾರಿಯೂ ಗುಜರಾತ್ ಮೊದಲ ಸ್ಥಾನದಲ್ಲಿತ್ತು. ಈ ಬಾರಿ ಸಹ ಗುಜರಾತ್ ಮೊದಲ ಸ್ಥಾನ ಪಡೆದಿದ್ದು, ಆಂಧ್ರ ಪ್ರದೇಶ ದ್ವಿತೀಯ, ಮಧ್ಯ ಪ್ರದೇಶ ತೃತೀಯ, ಗೋವಾ ನಾಲ್ಕು, ಕರ್ನಾಟಕ ಐದು ಹಾಗೂ ತಮಿಳುನಾಡು ಆರನೇ ಸ್ಥಾನ ಪಡೆದಿವೆ. ಕಳೆದ ಬಾರಿ ಕರ್ನಾಟಕ 4ನೇ ಸ್ಥಾನ ಪಡೆದಿತ್ತು.

ಈಶಾನ್ಯ ಹಾಗೂ ಹಿಮಾಲಯನ್ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ ಪ್ರಥಮ ಸ್ಥಾನ ಪಡೆದಿದ್ದರೆ, ಉತ್ತರಾಖಂಡ್, ತ್ರಿಪುರ ಮತ್ತು ಅಸ್ಸಾಂ ನಂತರದ ಸ್ಥಾನಗಳಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳು ಈ ಬಾರಿ ಮೊದಲ ಬಾರಿಗೆ ಅಂಕಿ ಅಂಶಗಳನ್ನು ಸಲ್ಲಿಸಿದ್ದು, ಈ ಪಟ್ಟಿಯಲ್ಲಿ ಪುದುಚೇರಿ ಮೊದಲ ಸ್ಥಾನ ಪಡೆದಿದೆ.

ಸಾಮಾನ್ಯ ರಾಜ್ಯಗಳ ಪೈಕಿ ಹರ್ಯಾಣ ಹಾಗೂ ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳ ಪೈಕಿ ಉತ್ತರಾಖಂಡ್ ಪ್ರಥಮ ಸ್ಥಾನ ಪಡೆದಿವೆ. ಕಳೆದ ಮೂರು ವರ್ಷಗಳಲ್ಲಿ ಸರಾಸರಿ ಶೇ.80 ರಷ್ಟು ರಾಜ್ಯಗಳು ನೀರು ನಿರ್ವಹಣೆ ಕುರಿತ ಅಂಕಿ ಅಂಶಗಳನ್ನು ಸಲ್ಲಿಸಿದ್ದು, ಬೆಳವಣಿಗೆ ಕಾಣುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನೀರಿನ ವೈಜ್ಞಾನಿಕ ನಿರ್ವಹಣೆಯು ಭಾರತದ ಬೆಳವಣಿಗೆ ಮತ್ತು ಪರಿಸರ ವ್ಯವಸ್ಥೆಯ ಸುಸ್ಥಿರತೆಗೆ ಪ್ರಮುಖವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನೀರಿನ ನಿರ್ವಹಣೆ ಕುರಿತು ರಾಜ್ಯಗಳ ನಡುವೆ ಸಹಕಾರ ಮನೋಭವನೆ ಹಾಗೂ ವೈಜ್ಞಾನಿಕವಾಗಿ ನೀರು ನಿರ್ವಹಿಸುವಲ್ಲಿ ರಾಜ್ಯಗಳ ನಡುವೆ ಸ್ಪರ್ಧಾತ್ಮಕತೆ ಹುಟ್ಟುಹಾಕುವ ದೃಷ್ಟಿಯಿಂದ 2018ರಲ್ಲಿ ಮೊದಲ ಬಾರಿಗೆ ನೀತಿ ಆಯೋಗ ಸಲಹೆಯಂತೆ ನೀರು ನಿರ್ವಹಣಾ ಸೂಚ್ಯಂಕ ಬಿಡುಗಡೆಯಾಗುತ್ತಿದೆ. ನೀರಿನ ನಿರ್ವಹಣೆ ಹಾಗೂ ಜೀವನ ಚಕ್ರದಲ್ಲಿ ನೀರಿನ ಬಳಕೆಯ ವಿವಿಧ ಆಯಾಮಗಳನ್ನು ಅಳೆಯುವ ಪ್ಯಾನ್ ಇಂಡಿಯಾದ ಭಗವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Comments

Leave a Reply

Your email address will not be published. Required fields are marked *