ಕುಡಿಯುವ ನೀರಿನ ಬ್ಯಾರಲ್‍ಗಳಿಗೆ ಬೀಗ

ವಿಜಯಪುರ: ಜಿಲ್ಲೆಯಲ್ಲಿ ಈ ಬಾರಿ ನೀರಿಗಾಗಿ ಹಾಹಾಕಾರ ಹೆಚ್ಚಾಗುತ್ತಿದೆ. ತಿಕೋಟ ತಾಲೂಕಿನ ಕಳ್ಳಕವಟಗಿ ತಾಂಡಾದಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಕುಡಿಯುವ ನೀರಿಗಾಗಿ 2 ಕಿ.ಮೀ ದೂರ ತೆರಳಿ ನೀರು ತರಬೇಕಾಗಿದೆ. ಹೀಗೆ ತಂದ ನೀರನ್ನು ಬ್ಯಾರಲ್‍ಗಳಲ್ಲಿ ಸಂಗ್ರಹಿಸಿ, ಕೆಲಸಕ್ಕೆ ಹೋದಾಗ ನೀರನ್ನು ಯಾರೂ ಕದಿಯಬಾರದು ಅಂತ ಬೀಗ ಜಡಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾವೇರಿ: ಕಳೆದ 6 ತಿಂಗಳಿಂದ ಇಲ್ಲಿ ನೀರಿನ ಸಮಸ್ಯೆ ಇದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಯಾರೆ ಎಂದಿಲ್ಲ. ಅತ್ತ ಹಾವೇರಿಯಲ್ಲಿ ಕೆರೆ-ಕಟ್ಟೆಗಳೆಲ್ಲಾ ಬತ್ತಿ ಹೋಗಿದ್ದು ಜನ-ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಮೇವಿಲ್ಲದೇ ಪರದಾಡುವಂತಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀತಿ ಸಂಹಿತೆ ಹೆಸರಲ್ಲಿ ಯಾವ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಿವಮೊಗ್ಗ: ಮಲೆನಾಡಿನ ತುಂಗಾನದಿ ದಂಡೆಯಲ್ಲಿರುವ ಶಿವಮೊಗ್ಗ ನಗರದಲ್ಲಿ ನಿತ್ಯವೂ ಕುಡಿಯುವ ನೀರಿಗೆ ಹೊಡೆದಾಟಗಳಾಗುತ್ತಿವೆ. ಒಂದನೇ ವಾರ್ಡ್ ಗೆ ಸೇರಿರುವ ವಾಜಪೇಯಿ ಬಡಾವಣೆಯಲ್ಲಿ ನಿತ್ಯ ನೀರಿಗಾಗಿ ಅಲೆದಾಟ- ಹೊಡೆದಾಟ ನಡೆಯುತ್ತಲೇ ಇದೆ. ಎಪಿಎಂಸಿಯ ಹಮಾಲಿ ಕಾರ್ಮಿಕರು ಹಾಗೂ ಇನ್ನಿತರ ಬೇರೆ ಉದ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರೇ ಇರುವ ಈ ಬಡಾವಣೆಯಲ್ಲಿ 650 ಮನೆಗಳಿವೆ. ಆದರೆ, ಇದೂವರೆಗೂ ಇಲ್ಲಿಗೆ ನೀರಿನ ವ್ಯವಸ್ಥೆ ಮಾಡಿಲ್ಲ.

ನಿತ್ಯ ಟ್ಯಾಂಕರ್ ನೀರಿಗಾಗಿ ಇಲ್ಲಿನ ಕೂಲಿ ಕಾರ್ಮಿಕರು ಕಾಯುತ್ತಲೇ ಇರಬೇಕು. ಇಲ್ಲಿನ ಕೂಲಿ ಮಹಿಳೆಯುರು ನೀರಿನ ವಿಷಯದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ನೀರು ಕೊಡಿ, ಇಲ್ಲ ವಿಷ ಕೊಡಿ ಸಾಮೂಹಿಕವಾಗಿ ಸಾಯುತ್ತೇವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *