ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಮಾರಾಟವಾಗ್ತಿದೆ ಜೀವ ಜಲ

-ಕುಡಿಯಲು ನೀರಿಲ್ಲದಿದ್ದರೂ ಜೋರಾಗಿದೆ ತುಂಗಭದ್ರೆಯಲ್ಲಿ ನೀರಿನ ವ್ಯಾಪಾರ

-ಖಾಸಗಿ ಬೋರ್‍ವೆಲ್‍ಗಳ ಮೇಲೆ ಹಿಡಿತ ಸಾಧಿಸುವ ಜಿಲ್ಲಾಡಳಿತದ ಉದ್ದೇಶ ವಿಫಲ

ರಾಯಚೂರು: ಜಿಲ್ಲೆಯಲ್ಲಿ ಹರಿಯುವ ತುಂಗಾಭದ್ರ ನದಿ ಸಂಪೂರ್ಣ ಬತ್ತಿಹೋಗಿದೆ. ನದಿ ಪಾತ್ರದ ಗ್ರಾಮಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಉಲ್ಭಣಿಸುತ್ತಿದೆ. ಪರಸ್ಥಿತಿ ಹೀಗಿದ್ದರೂ ನದಿ ತಟದಲ್ಲಿ ಖಾಸಗಿ ಬೋರ್‍ವೆಲ್ ಕೊರೆದಿರುವ ರೈತರು ನೀರನ್ನ ಆಂಧ್ರಪ್ರದೇಶಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಖಾಸಗಿ ಬೋರ್‍ವೆಲ್, ಕೆರೆಗಳನ್ನ ಸ್ವಾಧೀನಕ್ಕೆ ಪಡೆದು ಬರಗಾಲ ನಿರ್ವಹಣೆಗೆ ಮುಂದಾಗಿರುವ ಜಿಲ್ಲಾಡಳಿತಕ್ಕೆ ಹಿನ್ನೆಡೆಯಾಗಿದೆ.

ರಾಯಚೂರಲ್ಲಿ ನೀರಿನ ಸಮಸ್ಯೆ ಹೇಳತೀರದ ಮಟ್ಟಕ್ಕೆ ಇದ್ರೂ ಜಿಲ್ಲೆಯಿಂದ ಆಂಧ್ರಪ್ರದೇಶದ ಗಡಿಯ ಜಮೀನುಗಳಿಗೆ ನೀರು ಮಾರಾಟವಾಗುತ್ತಿದೆ. ಅದೂ ಬತ್ತಿ ಹೋಗಿರೋ ತುಂಗಾಭದ್ರಾ ನದಿಯ ಮೂಲಕ ನೀರನ್ನ ಸರಬರಾಜು ಮಾಡಲಾಗುತ್ತಿದೆ. ರಾಜ್ಯದ ನದಿಯ ಈ ದಡದಿಂದ ಆಂಧ್ರಪ್ರದೇಶದ ಆ ದಡದವರೆಗೆ ಪೈಪ್‍ಲೈನ್ ಅಳವಡಿಸಿ ಬೋರ್‍ವೆಲ್ ನೀರನ್ನ ಹರಿಸಲಾಗುತ್ತಿದೆ. ಇನ್ನೂ ಕೆಲ ರೈತರು ನದಿಯಲ್ಲಿ ಹೊಂಡಗಳನ್ನ ನಿರ್ಮಿಸಿ ಅದಕ್ಕೆ ನೀರನ್ನ ಬಿಡುತ್ತಿದ್ದಾರೆ. ಆಂಧ್ರ ರೈತರು ಆ ಹೊಂಡಗಳಿಂದ ನೀರನ್ನ ಪಂಪ್ ಸೆಟ್ ಮೂಲಕ ಪಡೆದುಕೊಳ್ಳುತ್ತಿದ್ದಾರೆ.

ನದಿ ತಟದಲ್ಲಿ ಬೋರ್‍ವೆಲ್ ಕೊರೆದಿರುವ ರೈತರಲ್ಲಿ ಕೆಲವರ ಬೆಳೆ ಕಟಾವಾಗಿದ್ದು, ಇನ್ನೂ ಕೆಲವು ರೈತರ ಬೆಳೆ ಹಾಳಾಗಿದ್ದರಿಂದ ಆಂಧ್ರಪ್ರದೇಶದ ರೈತರಿಗೆ ನೀರು ಮಾರುತ್ತಿದ್ದಾರೆ. ಭತ್ತ, ಮೆಕ್ಕೆಜೋಳ ಬೆಳೆದಿರುವ ಆಂಧ್ರದ ಕರ್ನೂಲ್ ಜಿಲ್ಲೆಯ ಮಾಧಾವರಂ, ಅಗಸನೂರು, ಕಂದಕನೂರು, ರಾಂಪುರ ಗ್ರಾಮಗಳ ರೈತರು ರಾಜ್ಯದ ಚಿಕ್ಕಮಂಚಾಲಿ, ತುಂಗಭದ್ರಾ, ಬುಳ್ಳಾಪುರ, ಎಲೆಬಿಚ್ಚಾಲಿ, ಕಮಲಾಪುರ ಗ್ರಾಮಗಳ ಬೋರ್‍ವೆಲ್‍ನಿಂದ ನೀರು ಪಡೆಯುತ್ತಿದ್ದಾರೆ.

ಮೊದಲಿನಿಂದಲೂ ಬೇಸಿಗೆಯಲ್ಲಿ ನೀರಿನ ವ್ಯವಹಾರ ನಡೆಯುತ್ತಲೇ ಬಂದಿದೆ. ದಿನ, ವಾರದ ಲೆಕ್ಕದಲ್ಲಿ ನೀರನ್ನ ಮಾರಾಟ ಮಾಡುತ್ತಿದ್ದಾರೆ. ಆದ್ರೆ ಈ ವರ್ಷ ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿರುವುದರಿಂದ ಖಾಸಗಿ ಬೋರ್‍ವೆಲ್‍ಗಳನ್ನ ವಶಕ್ಕೆ ಪಡೆದು ನೀರು ಸರಬರಾಜು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ ನದಿ ತಟದ ಜನ ನೀರನ್ನ ಆಂಧ್ರಪ್ರದೇಶಕ್ಕೆ ಮಾರಾಟ ಮಾಡುತ್ತಿದ್ದಾರೆ. ಎಲ್ಲೆಲ್ಲಿ ನೀರಿನ ಮಾರಾಟ ನಡೆಯುತ್ತಿದೆ ಅನ್ನೋದನ್ನ ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ.

ಒಟ್ನಲ್ಲಿ, ಜಿಲ್ಲೆಯ ಕೆಲವೆಡೆ ದುಡ್ಡು ಕೊಟ್ರೂ ನೀರು ಸಿಗದ ಪರಸ್ಥಿತಿ ಎದುರಾಗಿರುವಾಗ ಜಿಲ್ಲೆಯ ರೈತರೇ ಆಂಧ್ರಕ್ಕೆ ನೀರು ಮಾರಾಟ ಮಾಡುತ್ತಿರುವುದು ವಿಪರ್ಯಾಸ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ನೀರನ್ನ ಒದಗಿಸಬೇಕಿದೆ.

 

Comments

Leave a Reply

Your email address will not be published. Required fields are marked *