ಅನ್ನ, ನೀರು ಇಲ್ಲದೆ ಕೋತಿಗಳ ಪರದಾಟ – ಕೋಲಾರದ ಅಂತರಗಂಗೆಯಲ್ಲಿ ಕರುಳು ಹಿಂಡುವ ದೃಶ್ಯ

– ಮೂಕಪ್ರಾಣಿಗಳ ರೋದನೆ ಕೇಳೋರ್ಯಾರು..?

ಕೋಲಾರ: ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕೋಲಾರದ ಅಂತರಗಂಗೆಯಲ್ಲಿ ವರ್ಷದ 365 ದಿನಗಳು ಗಂಗೆ ನಿರಂತರವಾಗಿ ಹರಿಯುತ್ತಾಳೆ. ಆದರೂ ಅಲ್ಲಿನವರ ಹಸಿವು, ದಾಹ ಮಾತ್ರ ನೀಗುತ್ತಿಲ್ಲ. ಪರಿಣಾಮ ಹಸಿವು ನೀಗಿಸಿಕೊಳ್ಳಲು ಅಲ್ಲಿಗೆ ಬಂದವರ ಬಳಿ ಕಾಡಿ ಬೇಡಿ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಿತಿ ಮೀರಿದ ತಾಪಮಾನದಿಂದ ತತ್ತರಿಸಿ ಹೋಗಿರುವ ಜನ ಹನಿ ನೀರಿಗೂ ಪರದಾಡುತ್ತಿದ್ದಾರೆ. ಜನರ ಕಥೆಯೇ ಹೀಗಾದರೆ ಪ್ರಾಣಿಗಳ ಕಥೆ ಏನಾಗಬೇಡ ಹೇಳಿ. ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳ ಅಂತರಗಂಗೆಯ ಬೆಟ್ಟದಲ್ಲಿರುವ ಸಾವಿರಾರು ಕೋತಿಗಳು ನೀರಿಗಾಗಿ ಪರದಾಡುತ್ತಿವೆ. ಅರಣ್ಯ ಇಲಾಖೆ ಬೆಟ್ಟದಲ್ಲಿ ಮರಗಿಡಗಳನ್ನು ಬೆಳೆಸಿದೆಯಾದರೂ ಕೋತಿಗಳಿಗೆ ಆಹಾರ ಸಿಗುತ್ತಿಲ್ಲ. ಹೀಗಾಗಿ ಪ್ರವಾಸಿಗರು ಬಂದು ಕೊಡುವ ಆಹಾರವೇ ಈ ಕೋತಿಗಳ ಜೀವಕ್ಕೆ ಆಧಾರವಾಗಿದೆ ಎಂದು ವನ್ಯಜೀವಿ ಪರಿಪಾಲಕ ತ್ಯಾಗರಾಜ್ ಹೇಳಿದ್ದಾರೆ. ಇದನ್ನೂ ಓದಿ: ಬಂಡೀಪುರಕ್ಕೆ ಬೆಂಕಿ- ಮೇವು, ನೀರಿಲ್ಲದೆ ನಾಡಿನತ್ತ ಆನೆಗಳ ಹೆಜ್ಜೆ

ಮುಜರಾಯಿ ಇಲಾಖೆ ದೇಗುಲವನ್ನು ಸರಿಯಾಗಿ ನಿರ್ವಹಣೆ ಮಾಡದೇ ಪ್ರವಾಸಿಗರ ಸಂಖ್ಯೆ ಕೂಡಾ ವಿರಳವಾಗಿದೆ. ಕೆಲ ಕೋತಿಗಳು ಊಟ ಇಲ್ಲದೆ ಸಿಕ್ಕ ಎಲೆ, ಕಾಳು, ಕಡ್ಡಿ ತಿಂದು ಜೀವ ಉಳಿಸಿಕೊಂಡಿವೆ. ಕೆಲ ಪ್ರಾಣಿಪ್ರಿಯರು ಈ ಮೂಕಜೀವಗಳ ಪರದಾಟ ನೋಡಲಾಗದೇ ಮುದ್ದೆ, ಹಣ್ಣು ತರಕಾರಿ ತಂದು ಕೊಡುತ್ತಿದ್ದಾರೆ ಎಂದು ಸ್ಥಳೀಯ ವಿನುಷ್ ತಿಳಿಸಿದ್ದಾರೆ.

ಹನುಮಂತನ ಪ್ರತಿರೂಪ ಎಂದೇ ಹೇಳಲಾಗುವ ಈ ಕೋತಿಗಳಿಗೆ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದಿರುವುದು ಪ್ರಾಣಿಪ್ರಿಯರ ನೋವಿಗೆ ಕಾರಣವಾಗಿದೆ. ಇನ್ನಾದರೂ ಅರಣ್ಯ ಇಲಾಖೆ ಕೋತಿಗಳ ಹಸಿವು ನೀಗಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *