ಬ್ಯಾಟ್ಸ್ ಮನ್ ಬಾರಿಸಿದ ಸಿಕ್ಸರ್ ಗೆ ಮೈದಾನದ ಹೊರಗಿದ್ದ ಕಾರು ಜಖಂ: ವಿಡಿಯೋ

ಹರಾರೆ: ಜಿಂಬಾಬ್ವೆ ತಂಡ ನೇಪಾಳ ತಂಡವನ್ನು ಸೋಲಿಸಿ 2019ರ ವಿಶ್ವಕಪ್ ಕನಸನ್ನು ಜೀವಂತವಾಗಿ ಉಳಿಸಿಕೊಂಡಿದೆ. ಅರ್ಹತಾ ಪಂದ್ಯದಲ್ಲಿ ನೇಪಾಳ ತಂಡವನ್ನು 116ರನ್ ಗಳಿಂದ ಜಿಂಬಾಬ್ವೆ ಸೋಲಿಸಿದೆ. ಅಷ್ಟೇ ಅಲ್ಲದೇ ಈ ಪಂದ್ಯದಲ್ಲಿ ಜಿಂಬಾಬ್ವೆಯ ಸಿಕಂದರ್ ರಾಜಾ ಸಿಕ್ಸರ್ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಜಿಂಬಾಬ್ವೆ ಆಟಗಾರ ಸಿಕಂದರ್ 66 ಎಸೆತಗಳಲ್ಲಿ 123ರನ್ ಬಾರಿಸಿದ್ದು, ಅವರ ಈ ಶತಕದ ನೆರವಿನಿಂದ ಜಿಂಬಾಬ್ವೆ 380 ರನ್ ಗಳನ್ನ ಬಾರಿಸಿ ನೇಪಾಳ ತಂಡಕ್ಕೆ ಟಾರ್ಗೆಟ್ ನೀಡಿತ್ತು.  ಆದರೆ ನೇಪಾಳ ತಂಡ 50 ಓವರ್ ಗಳಲ್ಲಿ 264 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡು ಸೋಲನ್ನು ಅನುಭವಿಸಿತು.

ನೇಪಾಳ ತಂಡದ ವಿರುದ್ಧ ಸಿಕಂದರ್ ಸೆಂಚುರಿ ಬಾರಿಸಿದಲ್ಲದೇ 3 ವಿಕೆಟ್‍ಗಳನ್ನು ಪಡೆದಿದ್ದಾರೆ. ಜಿಂಬಾಬ್ವೆ ತಂಡ 200 ರನ್ ಬಾರಿಸಿ 4 ವಿಕೆಟ್ ಕಳೆದುಕೊಂಡಾಗ ಸಿಕಂದರ್ ಮೈದಾನಕ್ಕೆ ಎಂಟ್ರಿ ನೀಡುವಾಗ ಅಲ್ಲಿದ್ದ ಜನರು ಅವರನ್ನು ಹುರಿದುಂಬಿಸಿ ಸ್ವಾಗತಿಸಿದರು. ಸಿಕಂದರ್ ಜೊತೆ ಜಿಂಬಾಬ್ವೆಯ ಅನುಭವಿ ಆಟಗಾರ ಬ್ರೆಂಡನ್ ಟೇಲರ್ ಕೂಡ 91 ಎಸೆತಗಳಲ್ಲಿ 100 ರನ್ ಬಾರಿಸಿದರು.

ಐದನೇ ವಿಕೆಟ್ ಪಾಟ್ನರ್ ಶಿಪ್ ನಲ್ಲಿ ಟೇಲರ್ ಹಾಗೂ ಸಿಕಂದರ್ ಇಬ್ಬರೂ ಸೇರಿ 173 ರನ್ ಗಳನ್ನು ಬಾರಿಸಿದರು. ಸಿಕಂದರ್ ಒಂದೇ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಹಾಗೂ 9 ಸಿಕ್ಸ್ ಗಳನ್ನು ಬಾರಿಸಿದ್ದಾರೆ. ಅದರಲ್ಲಿ ಒಂದು ಸಿಕ್ಸ್ ಮಾತ್ರ ಎಲ್ಲರ ಗಮನ ಸೆಳೆಯಿತು. ಸಿಕಂದರ್ ಹೊಡೆದ ಸಿಕ್ಸರ್ ಮೈದಾನದಿಂದ ಹೊರಹೋಗಿದಲ್ಲದೇ ಅಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ಜಖಂಗೊಳಿಸಿತ್ತು.

ಸಿಕಂದರ್ ಸಿಕ್ಸರ್ ಬಾರಿಸಿದ ವಿಡಿಯೋವನ್ನು ಐಸಿಸಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಿನ್ನೆ ನಡೆದ ಪಂದ್ಯದಲ್ಲಿ ಸಿಕಂದರ್ ತಮ್ಮ ಮೊದಲ ಸೆಂಚುರಿ ಹೊಡೆದಿದ್ದಲ್ಲದೇ ತಮ್ಮ ಸಿಕ್ಸರ್ ಮೂಲಕ ಮೈದಾನ ಹೊರಗಿದ್ದ ಕಾರಿನ ಕಿಟಕಿಯ ಗಾಜನ್ನು ಸಹ ಪುಡಿಪುಡಿ ಮಾಡಿದ್ದಾರೆ.” ಎಂದು ಟ್ವೀಟ್ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *