ಅಭ್ಯಾಸದ ವೇಳೆ ಧ್ರುವ್ ಹೆಲಿಕಾಪ್ಟರ್‍ನಿಂದ ಕೆಳಗೆ ಬಿದ್ದು ಗಾಯಗೊಂಡ ಯೋಧರು: ವಿಡಿಯೋ ನೋಡಿ

ನವದೆಹಲಿ: ಜನವರಿ 15ರ ಸೇನಾ ದಿನಾಚರಣೆ ಅಂಗವಾಗಿ ಅಭ್ಯಾಸ ಮಾಡುವ ವೇಳೆ ಮೂವರು ಭಾರತೀಯ ಯೋಧರು ಧ್ರುವ್ ಹೆಲಿಕಾಪ್ಟರ್‍ನಿಂದ ಕೆಳಗೆ ಬಿದ್ದು ಗಾಯಗೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.

ಯೋಧರು ಹೆಲಿಕಾಪ್ಟರ್‍ನಿಂದ ಹಗ್ಗ ಹಿಡಿದು ಕೆಳಗಿಳಿಯುತ್ತಿದ್ದರು. ಇಬ್ಬರು ಯೋಧರು ಹಗ್ಗದ ಮೇಲೆ ಇಳಿಯುತ್ತಿದ್ದರು. ಇನ್ನೇನು ಮೂರನೇ ಯೋಧ ಹಗ್ಗದಿಂದ ಇಳಿಯಬೇಕು ಎನ್ನುವಾಗ ಹಗ್ಗ ಕಟ್ ಆಗಿದೆ. ಪರಿಣಾಮ ಮೂವರು ಯೋಧರು ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಯೋಧರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಎಲ್ಲಾ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಘಟನೆ ಮಂಗಳವಾರದಂದು ನಡೆದಿದ್ದು, ಇದರ ವಿಡಿಯೋ ರಾಷ್ಟ್ರೀಯ ಮಾಧ್ಯಮಗಳಲ್ಲಿ ಇಂದು ಪ್ರಸಾರವಾಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.

1949ರ ಜನವರಿ 15ರಂದು ಲೆಫ್ಟಿನೆಂಟ್ ಜೆನರಲ್ ಕೆಎಂ ಕಾರ್ಯಪ್ಪ ಭಾರತ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಆದ ಜನರಲ್ ಸರ್ ಫ್ರಾನ್ಸಿಸ್ ಬುಚ್ಚರ್ ರಿಂದ ಅಧಿಕಾರ ವಹಿಸಿಕೊಂಡಿದ್ದರು. ಇದರ ಅಂಗವಾಗಿ ಪ್ರತಿ ವರ್ಷ ಜನವರಿ 15ರಂದು ಸೇನಾ ದಿನಾಚರಣೆ ಆಚರಿಸಲಾಗುತ್ತದೆ.

Comments

Leave a Reply

Your email address will not be published. Required fields are marked *