ಆನೆ ಮುಂದೆ ಬಾಹುಬಲಿ ಸ್ಟಂಟ್ ಮಾಡಲು ಹೋಗಿ ಫುಟ್ ಬಾಲ್ ನಂತೆ ಗಾಳಿಯಲ್ಲಿ ಹಾರಿಬಿದ್ದ! ವಿಡಿಯೋ

ತಿರುವನಂತಪುರಂ: ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಆನೆ ಏರುವಂತೆ ಸ್ಟಂಟ್ ಮಾಡಲು ಹೋಗಿ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ನಡೆದಿದೆ.

ಯುವಕನೊಬ್ಬ ಪ್ಲಾಸ್ಟಿಕ್ ಕವರ್ ಹಿಡಿದು ಆನೆಯ ಹತ್ತಿರ ಹೋಗಿ ಬಾಳೆಹಣ್ಣು ತಿನ್ನಿಸುತ್ತಿದ್ದನು. ಯುವಕ ಒಂದಾದ ಮೇಲೆ ಒಂದು ಬಾಳೆಹಣ್ಣು ತಿನ್ನಿಸುತ್ತಿದ್ದಂತೆ ಆನೆ ಕೂಡ ಮತ್ತೆ ಬಾಳೆಹಣ್ಣು ಬೇಕೆಂದು ಸನ್ನೆ ಮಾಡಿ ಹೇಳುತಿತ್ತು.

ಬಾಳೆ ಹಣ್ಣು ತಿನ್ನಿಸಲು ಹೋದಾಗ ಯುವಕನಿಗೆ ಸೊಂಡಿಲಿನ ಮೂಲಕ ಏರಿ ಆನೆ ಮೇಲೆ ಕುಳಿತುಕೊಳ್ಳುವ ಮನಸ್ಸಾಗಿದೆ. ಕೊನೆಯ ಬಾಳೆಹಣ್ಣು ತಿನ್ನಿಸಿದ ಮೇಲೆ ಯುವಕ ಆನೆಯ ದಂತ ಹಿಡಿದು ಸೊಂಡಿಲಿಗೆ ಮುತ್ತಿಟ್ಟಿದ್ದ. ಮೊದಲ ಮುತ್ತಿನ ಪ್ರಯತ್ನದಲ್ಲಿ ಆತ ಯಶಸ್ವಿಯಾಗಿದ್ದ.

ಯುವಕ ಪುನಃ ಆ ರೀತಿ ಮಾಡಲು ಪ್ರಯತ್ನಿಸಲು ಹೋದಾಗ ಫೇಸ್‍ ಬುಕ್ ಲೈವ್ ನಲ್ಲಿದ್ದ ಸ್ನೇಹಿತ ಈ ರೀತಿ ಮಾಡಬೇಡ ಎಂದು ಎಚ್ಚರಿಕೆ ನೀಡಿದ್ದ. ನೀನು ಮದ್ಯಪಾನ ಮಾಡಿದ್ದಿ. ಆ ರೀತಿ ಮಾಡಬೇಡ. ಆನೆಗೆ ಹುಚ್ಚು ಹಿಡಿಯುತ್ತೆ ಎಂದು ಆತನ ಸ್ನೇಹಿತ ಹೇಳಿದ್ದಾನೆ.

ಸ್ನೇಹಿತನ ಎಚ್ಚರಿಕೆಯ ಮಾತನ್ನು ಕೇಳದೇ ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಸೊಂಡಿಲಿನಿಂದ ಏರಿದಂತೆ ಪ್ರಯತ್ನಿಸಲು ಮುಂದಾಗಿದ್ದಾನೆ. ಸೊಂಡಿಲಿನ ಮೇಲೆ ಕಾಲು ಇಡುತ್ತಿದ್ದಂತೆ ರೊಚ್ಚಿಗೆದ್ದ ಆನೆ ಆತನ್ನು ತಿವಿದು ದೂರಕ್ಕೆ ಎಸೆದಿದೆ. ಫುಟ್‍ ಬಾಲ್ ನಂತೆ ಗಾಳಿಯಲ್ಲಿ ಹಾರಿ ಬಿದ್ದ ಯುವಕ ಬಳಿಕ ಪ್ರಜ್ಞೆ ಕಳೆದುಕೊಂಡಿದ್ದಾನೆ.

ಸದ್ಯ ಯುವಕ ಪ್ರಾಣಪಾಯದಿಂದ ಪಾರಾಗಿದ್ದರೂ ಬಿದ್ದ ರಭಸಕ್ಕೆ ಬೆನ್ನು ಮೂಳೆ ಮುರಿದುಕೊಂಡಿದ್ದಾನೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *