ಬಸ್ ಮೇಲೆ ದಾಳಿ ಮಾಡಿ ಗಾಜು ಪುಡಿಗೈದ ಆನೆ- ಒಳಗೆ ಕುಳಿತು ವಿಡಿಯೋ ಮಾಡಿದ ಚಾಲಕ

ಬೀಜಿಂಗ್: ಆನೆಯೊಂದು ಬಸ್ ಹಾಗೂ ಟ್ರಕ್ ಮೇಲೆ ದಾಳಿ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಚೀನಾದ ಯುನಾನ್ ಪ್ರಾಂತ್ಯದಲ್ಲಿ ಶನಿವಾರದಂದು ಈ ಘಟನೆ ನಡೆದಿದೆ.

ಆನೆ ಬಸ್ಸಿಗೆ ಗುದ್ದಿ ಮುಂಭಾಗದ ಗಾಜನ್ನ ಜಖಂಗೊಳಿಸಿದೆ. ಬಸ್ಸು ರಸ್ತೆ ಮಧ್ಯೆ ಕೆಟ್ಟು ನಿಂತಿದ್ದು, ಯಾವುದೇ ಪ್ರಯಾಣಿಕರಿರಲಿಲ್ಲ. ಆದ್ರೆ ಚಾಲಕ ಒಳಗೆ ಸಿಲುಕಿದ್ದರು. ನಂತರ ಆನೆ ಹತ್ತಿರದಲ್ಲೇ ನಿಲ್ಲಿಸಲಾಗಿದ್ದ ಚಿಕ್ಕ ಟ್ರಕ್ ಮೇಲೆ ದಾಳಿ ಮಾಡಿದೆ. ಘಟನೆಯಲ್ಲಿ ಎರಡೂ ವಾಹನಗಳಿಗೆ ಹಾನಿಯಾಗಿದೆ. ಆದ್ರೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಬಸ್ಸಿನೊಳಗೆ ಕುಳಿತಿದ್ದ ಚಾಲಕ ಆನೆ ದಾಳಿಯನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಜೊತೆಗೆ ಪ್ರತ್ಯಕ್ಷದರ್ಶಿಗಳು ಮಾಡಿದ ವಿಡಿಯೋ ಹಾಗೂ ಅರಣ್ಯ ಅಧಿಕಾರಿಗಳ ಡ್ರೋನ್ ವಿಡಿಯೋ ಕೂಡ ಲಭ್ಯವಾಗಿದೆ.

ಆನೆ ತನ್ನ ತಲೆಯನ್ನ ಬಸ್ಸಿಗೆ ಗುದ್ದಿ ಗಾಜು ಒಡೆಯುವಂತೆ ಮಾಡೋದನ್ನ ವಿಡಿಯೋದಲ್ಲಿ ಕಾಣಬಹುದು. ಬಳಿಕ ಬಸ್ಸನ್ನು ಕೆಲವು ಅಡಿಗಳಷ್ಟು ದೂರ ಹಿಂದಕ್ಕೆ ತಳ್ಳಿದೆ. ನಂತರ ಅದೇ ರಸ್ತೆಯಲ್ಲಿ ನಿಂತಿದ್ದ ಚಿಕ್ಕ ಟ್ರಕ್ ಉರುಳಿಸಲು ಪ್ರಯತ್ನಿಸಿದೆ. ಅಲ್ಲದೆ ಆನೆ ತನ್ನ ಮೈಯನ್ನ ಬಸ್ಸಿಗೆ ಉಜ್ಜಿಕೊಳ್ಳಿದನ್ನ ಕೂಡ ವಿಡಿಯೋದಲ್ಲಿ ಕಾಣಬಹುದು.

Comments

Leave a Reply

Your email address will not be published. Required fields are marked *