ಶಾಂತಿ ಸಭೆಯಲ್ಲಿ ನಿದ್ದೆ: ಗಡದ್ದಾಗಿ ತೂಕಡಿಸಿದ ಶಾಸಕರು, ಅಧಿಕಾರಿಗಳು!, ತಿಂಡಿ ಬಂದಾಗ ಎದ್ರು!

ಮಂಗಳೂರು: ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಲ್ಲಿ ರಾಜಕೀಯ ಮಾಡುತ್ತಿರುವ ಜನಪ್ರತಿನಿಧಿಗಳ ಕೆಸರೆರಚಾಟ ಮುಂದುವರಿಯುತ್ತಿದ್ದರೆ, ಗುರುವಾರ ಸರ್ಕಾರದಿಂದ ಆಯೋಜನೆಗೊಂಡಿದ್ದ ಶಾಂತಿ ಸಭೆ ಒಂದರ್ಥದಲ್ಲಿ ನಿದ್ದೆಯ ಸಭೆಯಾಗಿತ್ತು.

ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಾಟೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ಶಾಂತಿಸಭೆಯಲ್ಲಿ ಶಾಸಕರು, ಅಧಿಕಾರಿಗಳು ಗಡದ್ದಾಗಿ ನಿದ್ದೆ ಮಾಡಿದ್ದಾರೆ.

ಮಂಗಳೂರು ಉತ್ತರ ವಿಧಾನಸಭೆಯ ಶಾಸಕ ಮೊಯಿದ್ದೀನ್ ಬಾವ, ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಫುಲ್ ನಿದ್ದೆಗೆ ಜಾರಿದ್ದರು. ಮೊಯಿದ್ದೀನ್ ಬಾವ ಅವರು ಬಿದ್ದು ಬಿದ್ದು ತೂಕಡಿಸುತ್ತಿದ್ದರೆ, ಸಚಿವ ಯು.ಟಿ. ಖಾದರ್ ಅವರಿಗೆ ಆಗಾಗ ಆಕಳಿಕೆ ಬರುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ಜಿ ಜಗದೀಶ್ ಅವರು ನಿದ್ದೆಗೆ ಜಾರಿದ್ದರು.

ಉಪಹಾರ ಬಂದ ಕೂಡಲೇ ನಿದ್ದೆ ಓಡಿ ಹೋಗಿತ್ತು. ನಿದ್ದೆಯಿಂದ ಕಣ್ಣೊರೆಸಿಕೊಂಡು ಶಾಸಕರು ತಿಂಡಿ ತಿನ್ನುತ್ತಿದ್ದರು.

ಈ ಶಾಂತಿ ಸಭೆಗೆ ಬಿಜೆಪಿಯವರು ಬಹಿಷ್ಕಾರ ಹಾಕಿದ್ದರೆ, ಶಾಂತಿಯಾತ್ರೆಗೆ ಪೊಲೀಸರು ಅನುಮತಿ ನೀಡಿಲ್ಲ ಎಂದು ಜೆಡಿಎಸ್ ನಾಯಕರು ಹೊರ ನಡೆದರು. ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಲು ತೀರ್ಮಾನವಾಗಿದ್ದು, ಗೆರಿಲ್ಲಾ ರೀತಿಯ ದಾಳಿ ನಡೆಯುತ್ತಿದೆ ಅಂತ ಸಭೆಯಲ್ಲಿ ಆತಂಕ ವ್ಯಕ್ತವಾಯಿತು.

ಶಾಂತಿ ಸಭೆಗೆ ಬರಬೇಕಾದವರೇ ಬಂದಿಲ್ಲ. ಅವರು ಯಾಕೆ ಬಂದಿಲ್ಲ ಎಂದು ಗೊತ್ತಿಲ್ಲ. ಶಾಂತಿ ನೆಲೆಸುವ ಉದ್ದೇಶ ಇದ್ದವರು ಬಂದಿದ್ದೇವೆ ಎಂದು ಬಿಜೆಪಿ ವಿರುದ್ಧ ಸಚಿವ ರಮಾನಾಥ್ ರೈ ಮತ್ತು ಖಾದರ್ ಕಿಡಿಕಾರಿದರು. ಇನ್ನು, ಬಿಜೆಪಿಗೆ ಶಾಂತಿ ನೆಲೆಸುವುದು ಅಗತ್ಯ ಇಲ್ಲ. ಘಟನೆಯನ್ನು ಬಿಜೆಪಿ ಚುನಾವಣೆಗಾಗಿ ಉಪಯೋಗಿಸುತ್ತಿದೆ ಅಂತ ಕಮ್ಯುನಿಸ್ಟ್ ನಾಯಕರು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *