ಐತಿಹಾಸಿಕ ಬಸವೇಶ್ವರ ಜಾತ್ರೆಯಲ್ಲಿ ಯುವತಿಯರಿಂದ ಅಶ್ಲೀಲ ನೃತ್ಯ ಪ್ರದರ್ಶನ

– ಸಂಘಟಕರ ವಿರುದ್ಧ ಬಸವ ಭಕ್ತರ ಆಕ್ರೋಶ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದ ಬಸವೇಶ್ವರ ಜಾತ್ರೆಯ ಸಮಾರಂಭದಲ್ಲಿ ರಸಮಂಜರಿ ಕಾರ್ಯಕ್ರಮದ ಹೆಸರಿನಲ್ಲಿ ಯುವತಿಯರಿಂದ ಅಶೀಲ ನೃತ್ಯ ಪ್ರದರ್ಶನ ಏರ್ಪಡಿಸಿದ್ದ ಸಂಘಟಕರ ವಿರುದ್ಧ ಬಸವ ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಂಘಟಕರು ಆಗಸ್ಟ್ 28 ರಂದು ನಡೆದ ರಸಮಂಜರಿ ಕಾರ್ಯಕ್ರಮದ ಹೆಸರಿನಲ್ಲಿ ಯುವತಿಯರಿಂದ ಅಶ್ಲೀಲ ನೃತ್ಯ ಪ್ರದರ್ಶನ ನಡೆಸಿದ್ದಾರೆ. ಯುವತಿಯರ ಅಶ್ಲೀಲ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಸವ ಭಕ್ತರು ಆಕ್ರೋಶ ವ್ಯಕ್ತಪಡಿಸಿ, ಸಂಘಟಕರು ಬಸವಣ್ಣನವರಿಗೆ ಅಪಮಾನ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ ಈ ಕುರಿತು ಸಚಿವರು ಏನು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಬಸವೇಶ್ವರ ಜನ್ಮಸ್ಥಳವಾದ ಬಸವನ ಬಾಗೇವಾಡಿಯಲ್ಲಿ ಐತಿಹಾಸಿಕ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಆಗಸ್ಟ್ 27 ರಿಂದ 30 ರವರೆಗೆ ನಡೆಯುವ ನಾಲ್ಕು ದಿನಗಳ ಜಾತ್ರಾ ಮಹೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜಾತ್ರಾ ಸಮಿತಿ ಸಂಘಟಕರು ಹಮ್ಮಿಕೊಂಡಿದ್ದರು. ಜಾತ್ರೆಯ ಉಸ್ತುವಾರಿಯನ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ವಹಿಸಿಕೊಂಡಿತ್ತು. ಆಗಸ್ಟ್ 27 ರಂದು ಆರೋಗ್ಯ ಸಚಿವ ಶಿವಾನಂದ ಪಾಟೀಲರು ಸ್ವತಃ ತಾವೇ ಬೆಳ್ಳಿ ಪಲ್ಲಕ್ಕಿ ಹೊರುವ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *