ಜ.11, 12 ರಂದು ಬೆಂಗಳೂರಿನಲ್ಲಿ ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ

ಬೆಂಗಳೂರು: ಸ್ಥಾನಿಕ ಬ್ರಾಹ್ಮಣ ಮಹಾಮಂಡಲ(ರಿ.), ಮಂಗಳೂರು ಆಯೋಜನೆಯ ವಿಶ್ವ ಸ್ಥಾನಿಕ ಬ್ರಾಹ್ಮಣ ಸಮಾವೇಶ ಜ.11,12ರಂದು ಬೆಂಗಳೂರಿನ ಕೊಡಿಗೆಹಳ್ಳಿಯ ಜ್ಞಾನಶಕ್ತಿ ಮಂಟಪದಲ್ಲಿ ಆಯೋಜನೆಗೊಂಡಿದೆ.

2012, 2014, 2016ರಲ್ಲಿ ಉಡುಪಿ, ಪಡುಬಿದ್ರಿ, ಮಂಗಳೂರಿನಲ್ಲಿ ನಡೆಸಿದ್ದು ಇದೇ ಮೊದಲ ಬಾರಿಗೆ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ.

ಶನಿವಾರ ಬೆಳಗ್ಗೆ 10 ಗಂಟೆಗೆ ಹೆಬ್ಬೂರಿನ ಕೋದಂಡಾಶ್ರಮ ಮಠದ ಪೀಠಾಧಿಪತಿ ಶ್ರೀ ಶ್ರೀ ಮಾಧವಾಶ್ರಮ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿ ಜಿ.ರಶ್ಮಿ ಭಾಗವಹಿಸಲಿದ್ದಾರೆ.

ಭಾನುವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, ಹೈಕೋರ್ಟ್ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಭಾಗವಹಿಸಲಿದ್ದಾರೆ. ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಭಾ ಬೆಂಗಳೂರಿನ ಅಧ್ಯಕ್ಷರಾಗಿರುವ ರವೀಂದ್ರನಾಥ ರಾವ್ ಬೆಳ್ಳೆ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿದ್ದು, ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಅಧ್ಯಕ್ಷ ಜಗನ್ನಿವಾಸ ರಾವ್, ಪುತ್ತೂರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಸಾಮಾಜಿಕ ಸಂಸ್ಕಾರವನ್ನು ರೂಪಿಸುವ ಸನಾತನ ಹಿಂದೂ ಸಂಸ್ಕೃತಿಯ ಉತ್ಥಾನಕ್ಕಾಗಿ ಧರ್ಮಬೋಧೆ, ಪಾಠ ಪ್ರವಚನ, ಹಿರಿಯರಿಂದ ಧಾರ್ಮಿಕ ಸಂದೇಶ, ವಿಚಾರಗೋಷ್ಠಿಗಳು, ಕಲಾಲೋಕದ ಅನಾವರಣ, ಜನೋಪಯೋಗಿ ಅನೇಕ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು, ಸಂಪನ್ಮೂಲ ವ್ಯಕ್ತಿಗಳ ಸಮಾಗಮ, ವಿಚಾರ ಧಾರೆಗಳ ಚಿಂತನ- ಮಂಥನ, ಹಿರಿಯ ಸಾಧಕರಿಗೆ ಸಂಮಾನ, ಚಿಗುರು ಪ್ರತಿಭೆಗಳಿಗೆ ಪುರಸ್ಕಾರ ಹೀಗೆ ಹತ್ತು ಹಲವು ಕಾರ್ಯಕ್ರಮದ ಆಯೋಜನೆಯೇ ಈ ಸಮಾವೇಶದ ಮೂಲ ಉದ್ದೇಶ.

ಸಮಾವೇಶದಲ್ಲಿ ಆಚಾರ್ಯ ಶಂಕರರು ಮತ್ತು ಅದ್ವೈತ, ಸಾಮಾಜಿಕ ಸ್ವಾಸ್ಥ್ಯದಲ್ಲಿ ಮಹಿಳೆಯರ ಪಾತ್ರ, ಸ್ಥಾನಿಕರ ಸಾಮಾಜಿಕ ಮತ್ತು ಸಂಸ್ಕ್ರತಿಯ ಸವಾಲುಗಳು, ಸನಾತನ ಸಂಸ್ಕೃತಿಗೆ ಯುವ ಪೀಳಿಗೆಯ ಕೊಡುಗೆ, ಸ್ಥಾನಚಾರ್ಯರ ಅಸ್ಥಿತ್ವ ಮತ್ತು ಅಸ್ಮಿತೆಯ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ.

Comments

Leave a Reply

Your email address will not be published. Required fields are marked *