ಪಾಕಿಸ್ತಾನಕ್ಕೆ ಬಂದು ಕ್ರಿಕೆಟ್ ಆಡಿ: ಕೊಹ್ಲಿ ಬಳಿ ಪಾಕ್ ಅಭಿಮಾನಿಯಿಂದ ಬೇಡಿಕೆ

ನವದೆಹಲಿ: ಭಾರತದ ನಾಯಕ ವಿರಾಟ್ ಕೊಹ್ಲಿ ತಮ್ಮ ಉತ್ತಮವಾದ ಆಟದ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು ಈಗ ಪಾಕಿಸ್ತಾನದ ಅಭಿಮಾನಿಯೊಬ್ಬ ನಮ್ಮ ದೇಶಕ್ಕೆ ಬಂದು ಆಡಿ ಎಂದು ಬೇಡಿಕೆ ಇಟ್ಟಿದ್ದಾನೆ.

ಪಾಕಿಸ್ತಾನ ಮೂಲದ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ, ಕೊಹ್ಲಿ ಅವರು ಪಾಕಿಸ್ತಾನದಲ್ಲಿ ಬಂದು ಕ್ರಿಕೆಟ್ ಆಡಬೇಕು ಎಂದು ಬ್ಯಾನರ್ ಹಿಡಿದು ಬೇಡಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಭಾರತೀಯ ನೆಟ್ಟಿಗರು ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬುಧವಾರ ಲಾಹೋರ್‍ನ ಗಡಾಫಿ ಮೈದಾನದಲ್ಲಿ ನಡೆದ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಟಿ-20 ಪಂದ್ಯದ ವೇಳೆ ಮೈದಾನದಲ್ಲಿ ಬ್ಯಾನರ್ ಹಿಡಿದು, ಕೊಹ್ಲಿ ಅವರು ಪಾಕಿಸ್ತಾನಕ್ಕೆ ಬಂದು ಕ್ರಿಕೆಟ್ ಆಡಬೇಕು ಎಂದು ನಾವು ಆಶಿಸುತ್ತಿದ್ದೇವೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಬರೆದಿರುವ ಬ್ಯಾನರ್ ಹಿಡಿದು ಯುವಕ ಫೋಟೋಗೆ ಪೋಸ್ ನೀಡಿದ್ದಾನೆ.

ಈ ಫೋಟೋ ಸಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ಪೋಸ್ಟ್ ನೋಡಿದ ಭಾರತದ ಕ್ರಿಕೆಟ್ ಅಭಿಮಾನಿಗಳು ನಾವು ಕೂಡ ಅದನ್ನು ಬಯಸುತ್ತೇವೆ. ಪಾಕಿಸ್ತಾನ ಕೂಡ ಭಾರತಕ್ಕೆ ಬಂದು ಆಟ ಆಡುವುದನ್ನು ನಾವು ನೋಡಲು ಬಯಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ನಾವು ಪಾಕಿಸ್ತಾನದಲ್ಲಿ ಬಂದು ಆಡಲು ಇಷ್ಟಪಡುತ್ತೇವೆ. ಆದರೆ ಸ್ವಲ್ಪ ಪರಿಸ್ಥಿತಿ ಸುಧಾರಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

https://twitter.com/SiddarthRupani/status/1182031607554859010

2013 ರ ನಂತರ ಭಾರತ ಮತ್ತು ಪಾಕಿಸ್ತಾನ ಯಾವುದೇ ಮಾದರಿಯ ದ್ವಿಪಕ್ಷೀಯ ಸರಣಿಗಳನ್ನು ಆಡಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪಂದ್ಯಗಳನ್ನು ಆಡಿವೆ.

2009 ರಲ್ಲಿ ಪಾಕಿಸ್ತಾನದ ಗಡಾಫಿ ಮೈದಾನ ಬಳಿ ಲಂಕಾ ಕ್ರಿಕೆಟಿಗರ ಮೇಲ ಆದ ಉಗ್ರರ ದಾಳಿ ನಂತರ ಶ್ರೀಲಂಕಾದ ಕ್ರಿಕೆಟ್ ಟಿ20 ತಂಡದ ನಾಯಕ ಲಸಿತ್ ಮಾಲಿಂಗ, ಏಕದಿನ ತಂಡದ ನಾಯಕ ದಿಮುತ ಕರುಣಾರತ್ನೆ ಸೇರಿದಂತೆ 10 ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದ್ದರು. ಅದ್ದರಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ದಾಸುನ್ ಶಾನಕಾ ಅವರ ನೇತೃತ್ವದ ಯುಪಡೆಯನ್ನು ಆಯ್ಕೆ ಮಾಡಿ ಪಾಕಿಸ್ತಾನಕ್ಕೆ ಕಳಿಸಿತ್ತು.

ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವೆ ಕರಾಚಿಯಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ 2-0 ಅಂತರದಲ್ಲಿ ಗೆದ್ದುಕೊಂಡಿತ್ತು. ಒಂದು ಪಂದ್ಯ ಮಳೆಗೆ ರದ್ದಾಗಿತ್ತು. ನಂತರ ಲಾಹೋರ್ ನಲ್ಲಿ ನಡೆದ ಮೂರು ಪಂದ್ಯಗಳ ಟಿ-20 ಸರಣಿಯನ್ನು ಶ್ರೀಲಂಕಾ 3-0 ಅಂತರದಲ್ಲಿ ಗೆದ್ದುಕೊಂಡು ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.

Comments

Leave a Reply

Your email address will not be published. Required fields are marked *