ಶತಕ ಸಿಡಿಸಿ ತಂಡಕ್ಕೆ ಆಸರೆಯಾದ ಕೊಹ್ಲಿ – ಟೀಂ ಇಂಡಿಯಾಗೆ ಹಿನ್ನಡೆ

ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದು, ಕಡಿಮೆ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದರು.

ಇಂಗ್ಲೆಂಡ್ ನೆಲದಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದ ಕೊಹ್ಲಿ ವೃತ್ತಿ ಜೀವನದ 22ನೇ ಶತಕ ಪೂರೈಸಿದರು. ಇದಕ್ಕೂ ಮುನ್ನ 21 ರನ್ ಗಳಿಸಿದ್ದ ವೇಳೆ ಕೊಹ್ಲಿ 2ನೇ ಸ್ಲಿಪ್ ನಲ್ಲಿದ್ದ ಮಲಾನ್ ರಿಂದ ಜೀವದಾನ ಪಡೆದಿದ್ದರು. ಒಟ್ಟಾರೆ 149 ರನ್ (22 ಬೌಂಡರಿ, 1 ಸಿಕ್ಸರ್) ಸಿಡಿಸಿದ ಕೊಹ್ಲಿ, ಕೊನೆಯವರಾಗಿ ರಶೀದ್ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಟೀಂ ಇಂಡಿಯಾ ಮೊದಲ ಇನ್ನಿಂಗ್‍ನಲ್ಲಿ 13 ರನ್ ಗಳ ಹಿನ್ನಡೆ ಅನುಭವಿಸಿ 274 ರನ್ ಗಳಿಗೆ ಅಲೌಟ್ ಆಯಿತು.

2014 ರ ಇಂಗ್ಲೆಂಡ್ ಟೂರ್ನಿಯಲ್ಲಿ ಕೊಹ್ಲಿ 10 ಇನ್ನಿಂಗ್ಸ್ ಗಳಿಂದ ಸರಾಸರಿ 13.40 ಯಲ್ಲಿ ಕೇವಲ 134 ರನ್ ಗಳಿಸಿದ್ದರು. ಆದರೆ ಈ ಟೂರ್ನಿಯ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಟೀಕೆ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ. ಶತಕ ಸಂಭ್ರಮದ ವೇಳೆ ತಮ್ಮ ಮದುವೆಯ ರಿಂಗ್ ತೆಗೆದು ಮುತ್ತಿಟ್ಟ ಕೊಹ್ಲಿ ಈ ಮೂಲಕ ತಮ್ಮ ಶತಕವನ್ನು ಪತ್ನಿ ಅನುಷ್ಕಾ ಶರ್ಮಾರಿಗೆ ಆರ್ಪಿಸಿದರು.

ಇದಕ್ಕೂ ಮುನ್ನ 2ನೇ ದಿನದಾಟ ಆರಂಭಸಿದ ಇಂಗ್ಲೆಂಡ್ 287 ರನ್ ಗಳಿಗೆ ಮೊದಲ ಇನ್ನಿಂಗ್ಸ್‍ನಲ್ಲಿ ಅಲೌಟ್ ಆಯಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಆರಂಭಿಕರಾದ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ ಗೆ 50 ರನ್ ಗಳ ಜೊತೆಯಾಟ ನೀಡಿದರು. ಟೀ ವಿರಾಮದ ವೇಳೆ 160 ರನ್ ಗಳಿಸಿ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಟೀಂ ಇಂಡಿಯಾ ಪರ ವಿಜಯ್ (20), ಧವನ್ (26) ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ 4 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಬಳಿಕ ಬಂದ ರಹಾನೆ (15), ಪಾಂಡ್ಯ (22), ಅಶ್ವಿನ್ (10) ಎರಡಂಕಿ ಮೊತ್ತ ಗಳಿಸಿ ಪೆವಿಲಿಯನ್ ಸೇರಿದರು. ಉಳಿದಂತೆ ಕಾರ್ತಿಕ್ ಶೂನ್ಯ ಸುತ್ತಿದರೆ, ಶರ್ಮಾ (5), ಶಮಿ (2) ರನ್ ಗಳಿಸಿ ಔಟಾದರು.

ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಸ್ಯಾಮ್ ಕರನ್ 4 ವಿಕೆಟ್ ಪಡೆದರೆ, ಜೇಮ್ಸ್ ಆ್ಯಂಡರ್‍ಸನ್, ರಶೀದ್, ಸ್ಟೋಕ್ಸ್ ತಲಾ 2 ವಿಕೆಟ್ ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್‍ನಲ್ಲಿ ಫಾಲೋ ಮಾಡಿwww.instagram.com/publictvnews 

Comments

Leave a Reply

Your email address will not be published. Required fields are marked *