‘ನೀವು ಯಾವಾಗಲೂ ನನ್ನ ಕ್ಯಾಪ್ಟನ್’ – ನಂಬರ್ ಒನ್ ಪಟ್ಟ ಅಲಂಕರಿಸಿತು ಕೊಹ್ಲಿಯ ಮಾತು

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಧೋನಿಯನ್ನು ಅಭಿನಂದಿಸಿ ಮಾಡಿದ ಟ್ವೀಟ್ ಈ ವರ್ಷ ಕ್ರೀಡಾ ವಿಭಾಗದ ಅತಿ ಹೆಚ್ಚು ರಿಟ್ವೀಟ್ ಆದ ಟ್ವೀಟ್ ಎಂದು ಟ್ವಿಟ್ಟರ್ ಇಂಡಿಯಾ ಹೇಳಿದೆ.

ಜುಲೈ 7 ರಂದು ಧೋನಿ ಅವರ 38ನೇ ವಯಸ್ಸಿನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಸಂಜೆ 5:28ಕ್ಕೆ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದರು.

“ಹುಟ್ಟುಹಬ್ಬದ ಶುಭಾಶಯಗಳು ಮಹಿ ಭಾಯ್ ಧೋನಿ. ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ನಂಬಿಕೆ ಮತ್ತು ಗೌರವದ ಅರ್ಥ ತಿಳಿದಿರುತ್ತದೆ. ಹಲವು ವರ್ಷಗಳಿಂದ ನಿಮ್ಮ ಜೊತೆ ಇರುವ ಸ್ನೇಹದಿಂದ ನಾನು ಸಂತೋಷಗೊಂಡಿದ್ದೇನೆ. ನೀವು ನಮಗೆಲ್ಲ ದೊಡ್ಡ ಅಣ್ಣ ಇದ್ದಂತೆ. ಈ ಹಿಂದೆಯೇ ಹೇಳಿದಂತೆ ನೀವು ಯಾವಾಗಲೂ ನನ್ನ ಕ್ಯಾಪ್ಟನ್” ಎಂದು ಬರೆದು ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ಧೋನಿ ಜೊತೆಗಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಈ ಟ್ವೀಟ್ ಅನ್ನು 46 ಸಾವಿರ ಮಂದಿ ರಿಟ್ವೀಟ್ ಮಾಡಿದ್ದರೆ 4.13 ಲಕ್ಷ ಮಂದಿ ಲೈಕ್ ಮಾಡಿದ್ದರು.

ಈ ವರ್ಷದ ಸೆಪ್ಟೆಂಬರ್ 9 ರಂದು ವಿರಾಟ್ ಕೊಹ್ಲಿ ಧೋನಿ ಜೊತೆಗಿನ ಅದ್ಭುತ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 2016ರ ಟ್ವೆಂಟಿ-20 ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಫೋಟೋವನ್ನು ಟ್ವೀಟ್ ಮಾಡಿದ್ದ ವಿರಾಟ್ ಕೊಹ್ಲಿ, ಇದು ನಾನು ಎಂದಿಗೂ ಮರೆಯಲಾಗದ ಪಂದ್ಯ. ಅದು ವಿಶೇಷ ರಾತ್ರಿ. ಈ ವ್ಯಕ್ತಿ, ಫಿಟ್‍ನೆಸ್ ಟೆಸ್ಟ್ ಓಡುವಂತೆ ನನ್ನನ್ನು ಓಡಿಸಿದರು ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಮತ್ತೆ ಅಭಿಮಾನಿಗಳ ಮನಗೆದ್ದ ವಿರಾಟ್ ಕೊಹ್ಲಿ – ವೈರಲ್ ವಿಡಿಯೋ

2019ರ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‍ನಿಂದ ಎಂ.ಎಸ್.ಧೋನಿ ವಿರಾಮ ತೆಗೆದುಕೊಂಡಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಧೋನಿ ಅವರು ಜುಲೈ 30ರಿಂದ ಆಗಸ್ಟ್ 15 ರವರೆಗೆ ಕಾಶ್ಮೀರದಲ್ಲಿ ಪ್ಯಾರಾ ಕಮಾಂಡೋಗಳ ಬೆಟಾಲಿಯನ್‍ನಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿದ್ದರು. ವೆಸ್ಟ್ ಇಂಡೀಸ್  ಪ್ರವಾಸ, ಭಾರತದಲ್ಲಿ ನಡೆದ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಸರಣಿ ವೇಳೆ ತಂಡಕ್ಕೆ ಅಲಭ್ಯವಾಗಿದ್ದ ಧೋನಿ ಈ ನಡೆಯುತ್ತಿರುವ ವಿಂಡೀಸ್ ಸರಣಿಯ ಸಮಯದಲ್ಲೂ ವಿಶ್ರಾಂತಿಯಲ್ಲಿದ್ದಾರೆ.

Comments

Leave a Reply

Your email address will not be published. Required fields are marked *