ಅಂಪೈರ್ ನೋ ಬಾಲ್ ಎಡವಟ್ಟು – ನಾವು ಕ್ಲಬ್ ಕ್ರಿಕೆಟ್ ಆಡ್ತಿಲ್ಲ: ಕೊಹ್ಲಿ ಗರಂ

ಬೆಂಗಳೂರು: ಅಂಪೈರ್ ಮಾಡಿದ ನೋ ಬಾಲ್ ಎಡವಟ್ಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುರುವಾರ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 6 ರನ್‍ಗಳಿಂದ ಸೋಲು ಕಂಡಿದೆ. ಅಂಪೈರ್ ನೀಡಿದ್ದ ತಪ್ಪು ನಿರ್ಧಾರಕ್ಕೆ ನಾವು ಕ್ಲಬ್ ಕ್ರಿಕೆಟ್ ಆಡ್ತಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಗರಂ ಆಗಿದ್ದಾರೆ.

ಈ ಪಂದ್ಯದಲ್ಲಿ ಸೋತ ನಂತರ ವಿರಾಟ್ ಕೋಪದಲ್ಲಿ, “ನಾವು ಐಪಿಎಲ್ ಆಡುತ್ತಿದ್ದೇವೆ. ಕ್ಲಬ್ ಕ್ರಿಕೆಟ್ ಅಲ್ಲ. ಅಂಪೈರ್ ಕಣ್ಣು ಬಿಟ್ಟು ಇರಬೇಕಾಗುತ್ತದೆ. ಕೊನೆಯ ಎಸೆತದಲ್ಲಿ ಈ ರೀತಿ ಆಗಿರುವುದು ಬಹಳ ನಾಚಿಕೆಯ ವಿಷಯ. ಗೆಲ್ಲುವ ಪಂದ್ಯದಲ್ಲಿ ಅಂಪೈರ್ ಈ ರೀತಿ ನಿರ್ಧಾರ ನೀಡಿದರೆ, ಏನು ಆಗುತ್ತದೆ ನನಗೆ ಗೊತ್ತಿಲ್ಲ. ಇಂತಹ ಮ್ಯಾಚ್‍ಗಳಲ್ಲಿ ಅಂಪೈರ್ ಶಾರ್ಪ್ ಆಗಿ ಇರಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ.

ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಮಾಡಲು ನಿರ್ಧರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 8 ವಿಕೆಟ್ ಕಳೆದುಕೊಂಡು 187 ರನ್ ಸ್ಕೋರ್ ಮಾಡಿತ್ತು. ಬಳಿಕ ಆರ್‌ಸಿಬಿ ತಂಡ 20 ಒವರ್ ಗೆ 181 ರನ್ ಗಳಿಸಿತ್ತು. ಆದರೆ ಈ ಪಂದ್ಯದ ಕೊನೆಯ ಎಸೆತ ಈಗ ವಿವಾದ ಸೃಷ್ಟಿಯಾಗಿದೆ.

ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ 7 ರನ್‍ಗಳ ಅವಶ್ಯಕತೆ ಇತ್ತು. ಕೊನೆಯ ಒವರ್ ಅನ್ನು ಮುಂಬೈ ತಂಡದ ಆಟಗಾರ ಲಸಿತ್ ಮಾಲಿಂಗ ಬೌಲಿಂಗ್ ಮಾಡಿದ್ದಾಗ ಶಿವಂ ದುಬೆ ಕ್ರೀಸ್ ನಲ್ಲಿದ್ದರು. ಕೊನೆಯ ಎಸೆತದಲ್ಲಿ ಶಿವಂ ದುಬೆ ಯಾವುದೇ ರನ್ ಪಡೆಯಲಿಲ್ಲ. ಆದರೆ ರಿಪ್ಲೈ ನೋಡಿದ್ದಾಗ ಲಸಿತ್ ಅವರ ಕಾಲು ಕ್ರೀಸ್‍ಕ್ಕಿಂತ ಮುಂದೆ ಇತ್ತು. ಅಂದರೆ ನೋ ಬಾಲ್ ಆಗಿತ್ತು. ಆದರೆ ಅದನ್ನು ಅಂಪೈರ್ ಗಮನಿಸಲಿಲ್ಲ. ಅಂಪೈರ್ ನೋ ಬಾಲ್ ಎಂದು ಪರಿಗಣಿಸಿದ್ದರೆ ಕೊನೆಯ ಎಸೆತದಲ್ಲಿ 6 ರನ್ ಬೇಕಿತ್ತು. ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಿದ್ದರೆ ಪಂದ್ಯವನ್ನು ಆರ್‌ಸಿಬಿ ಗೆದ್ದುಕೊಳ್ಳುತಿತ್ತು.

ಎಬಿ ಡಿವಿಲಿಯರ್ಸ್ ಅಜೇಯ 70 ರನ್(41 ಎಸೆತ, 4 ಬೌಂಡರಿ, 6 ಸಿಕ್ಸರ್) ಚಚ್ಚಿ ಪಂದ್ಯವನ್ನು ಗೆಲುವಿನ ಹತ್ತಿರ ತಂದಿದ್ದರು.

Comments

Leave a Reply

Your email address will not be published. Required fields are marked *