50ನೇ ಟಿ- 20ಯಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದ ಕೊಹ್ಲಿ

ಕೊಲಂಬೋ: ಶ್ರೀಲಂಕಾ ವಿರುದ್ಧ ನಡೆದ ಏಕೈಕ ಟಿ-20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಭಾರತಕ್ಕೆ ಜಯವನ್ನು ತಂದುಕೊಟ್ಟ ನಾಯಕ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ.

ಹೌದು, ಮೂರು ಮಾದರಿಯ ಕ್ರಿಕೆಟ್‍ನ ಕಡಿಮೆ ಪಂದ್ಯದಲ್ಲಿ 15 ಸಾವಿರ ರನ್ ಪೂರ್ಣಗೊಳಿಸಿ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. 50 ಟಿ -20, 194 ಏಕದಿನ, 60 ಟೆಸ್ಟ್ ಸೇರಿ ಒಟ್ಟು 304 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

ಬುಧವಾರದ ಪಂದ್ಯದಲ್ಲಿ 82 ರನ್(54 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆಯುವ ಮೂಲಕ ಕೊಹ್ಲಿ ಟಿ-20 ಪಂದ್ಯದಲ್ಲಿ ಅತಿ ಹೆಚ್ಚು ರನ್ ಹೊಡೆದ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.

ಕೊಹ್ಲಿ 50 ಪಂದ್ಯಗಳಿಂದ 1830 ರನ್ ಹೊಡೆದಿದ್ದರೆ, ನ್ಯೂಜಿಲೆಂಡಿನ ಮಾಜಿ ಆಟಗಾರ ಬ್ರೆಂಡನ್ ಮೆಕ್ಕಲಂ 71 ಪಂದ್ಯಗಳಿಂದ 2140 ರನ್ ಹೊಡೆಯುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಶ್ರೀಲಂಕಾದ ಮಾಜಿ ಆಟಗಾರ ತಿಲಕರತ್ನೆ ದಿಲ್‍ಶಾನ್ 80 ಪಂದ್ಯಗಳನ್ನು ಆಡುವ ಮೂಲಕ 1889 ರನ್‍ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ನ್ಯೂಜಿಲೆಂಡಿನ ಮಾರ್ಟಿನ್ ಗುಪ್ಟಿಲ್ 61 ಪಂದ್ಯಗಳಿಂದ 1806 ರನ್ ಹೊಡೆಯುವ ಮೂಲಕ ನಾಲ್ಕನೇಯ ಸ್ಥಾನವನ್ನು ಪಡೆದಿದ್ದಾರೆ.

71 ರನ್ ಗಳಿಸಿದಾಗ ಕೊಹ್ಲಿ ಟಿ 20 ಟೂರ್ನಿಯ ಚೇಸಿಂಗ್ ನಲ್ಲಿ 1 ಸಾವಿರ ರನ್ ಪೂರ್ಣಗೊಳಿಸಿದರು. ಅಷ್ಟೇ ಅಲ್ಲದೇ ಚೇಸಿಂಗ್ ನಲ್ಲಿ ಅತಿ ಹೆಚ್ಚು ರನ್ ಹೊಡೆದಿದ್ದ ನ್ಯೂಜಿಲೆಂಡಿನ್ ಬ್ರೆಂಡನ್ ಮೆಕ್ಕಲಂ ದಾಖಲೆಯನ್ನು ಮುರಿದಿದ್ದಾರೆ. ಮೆಕ್ಕಲಂ ಚೇಸಿಂಗ್ ನಲ್ಲಿ 1006 ರನ್ ಹೊಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು.

82 ರನ್ ಹೊಡೆಯುವ ಮೂಲಕ ಚೇಸಿಂಗ್ ನಲ್ಲಿ ಅತ್ಯಧಿಕ ರನ್ ಹೊಡೆದ ಟೀಂ ಇಂಡಿಯಾದ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ 2010ರಲ್ಲಿ ಜಿಂಬಾಬ್ವೆ ವಿರುದ್ಧ ಸುರೇಶ್ ರೈನಾ 72 ರನ್ ಹೊಡೆದಿದ್ದರು.

ಕೊಹ್ಲಿ 50 ಟಿ-20 ಪಂದ್ಯದ 46 ಇನ್ನಿಂಗ್ಸ್ ಗಳಲ್ಲಿ ಒಟ್ಟು 1830 ರನ್ ಗಳಿಸಿದ್ದಾರೆ. ಔಟಾಗದೇ 90 ರನ್ ಅವರ ಅತ್ಯಧಿಕ ಮೊತ್ತ ಆಗಿದ್ದು, 12 ಬಾರಿ ನಾಟೌಟ್ ಆಗಿದ್ದಾರೆ. 53.82 ಸರಾಸರಿಯಲ್ಲಿ 136.16 ಸ್ಟ್ರೈಕ್ ರೇಟ್ ಹೊಂದಿರುವ ಕೊಹ್ಲಿ 17 ಅರ್ಧತಕ ಸಿಡಿಸಿದ್ದಾರೆ. ಒಟ್ಟು 196 ಬೌಂಡರಿ, 35 ಸಿಕ್ಸ್, 25 ಕ್ಯಾಚ್ ಗಳನ್ನು ಹಿಡಿದಿದ್ದಾರೆ.

ಇದನ್ನೂ ಓದಿ: ದ್ವಿಶತಕದ ಜೊತೆಯಾಟದ ದಶ ದಾಖಲೆ ಬರೆದ ವಿರಾಟ್ ಕೊಹ್ಲಿ!

 

 

 

Comments

Leave a Reply

Your email address will not be published. Required fields are marked *