ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಸೇರಿ ಜಂಟಿ ಏಕದಿನ ತಂಡವನ್ನು ಆಯ್ಕೆ ಮಾಡಿದ್ದು, ಆ ತಂಡಕ್ಕೆ ಧೋನಿಯನ್ನು ನಾಯಕನನ್ನಾಗಿ ಮಾಡಿದ್ದಾರೆ.
ಕೊರೊನಾ ಲಾಕ್ಡೌನ್ನಿಂದ ಇಡೀ ವಿಶ್ವವೇ ಸ್ತಬ್ಧವಾಗಿದೆ. ಈ ಹಿನ್ನೆಯಲ್ಲಿ ಮನೆಯಲ್ಲೇ ಉಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರರಾದ ಕೊಹ್ಲಿ ಮತ್ತು ಎಬಿಡಿ ಅಭಿಮಾನಿಗಳ ಜೊತೆ ಚಾಟ್ ಮಾಡಲು ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿದ್ದರು. ಈ ವೇಳೆ ಇಬ್ಬರು ಸೇರಿಕೊಂಡು ಭಾರತ ಮತ್ತು ಸೌತ್ ಅಫ್ರಿಕಾ ಆಟಗಾರರು ಇರುವ ತಮ್ಮ ನೆಚ್ಚಿನ ಏಕದಿನ ತಂಡವನ್ನು ಕಟ್ಟಿದ್ದಾರೆ.
https://www.instagram.com/p/B_U8grkFx3N/
ಈ ವೇಳೆ ಆರಂಭಿಕರ ಆಯ್ಕೆ ಬಂದಾಗ ಎಬಿಡಿಯವರು ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆ ಮಾಡಿಕೊಂಡರೆ, ಕೊಹ್ಲಿ ಮಾತ್ರ ತನ್ನ ಪ್ರಸ್ತುತ ಏಕದಿನ ತಂಡದ ಆರಂಭಿಕ ಆಟಗಾರ ಹಿಟ್ಮ್ಯಾನ್ ರೋಹಿತ್ ಶರ್ಮಾನನ್ನು ಎರಡನೇ ಆರಂಭಿಕನಾಗಿ ಆಯ್ಕೆ ಮಾಡಿದ್ದಾರೆ. ನಂತರ ಮೂರು ನಾಲ್ಕನೇ ಕ್ರಮಾಂಕಕ್ಕೆ ತಮ್ಮಿಬ್ಬರನ್ನೇ ಆಯ್ಕೆ ಮಾಡಿದ್ದು, ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಮತ್ತು ನಾಲ್ಕನೇ ಕ್ರಮಾಂಕಕ್ಕೆ ಎಬಿಡಿ ವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ.

ಇಬ್ಬರು ಸೇರಿ ಭಾರತ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರು ಮತ್ತು ಸೌತ್ ಆಫ್ರಿಕಾದ ಮಾಜಿ ಆಟಗಾರ ಜಾಕ್ ಕಾಲಿಸ್ ಅವರನ್ನು ತಮ್ಮ ತಂಡದ ಪ್ರಮುಖ ಆಲ್ರೌಂಡರ್ ಆಗಿ ಆಯ್ಕೆ ಮಾಡಿದ್ದಾರೆ. ನಂತರ ಧೋನಿ ಅವರುನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕೊಹ್ಲಿ ಭಾರತದ ಯುಜ್ವೇಂದ್ರ ಚಹಲ್ ಮತ್ತು ಬುಮ್ರಾ ಅವರನ್ನು ಆಯ್ಕೆ ಮಾಡಿಕೊಂಡರೆ, ಎಬಿಡಿ ಸೌತ್ ಆಫ್ರಿಕಾದ ಡೆಡ್ಲಿ ಬೌಲರ್ ಡೇಲ್ ಸ್ಟೇನ್ ಮತ್ತು ಕಗಿಸೊ ರಬಡಾ ಅವರನ್ನು ತಗೆದುಕೊಂಡಿದ್ದಾರೆ.

ನಂತರ ತಂಡಕ್ಕೆ ನಾಯಕನ ಆಯ್ಕೆ ಪ್ರಕ್ರಿಯೆ ಬಂದಾಗ ಕೊಹ್ಲಿ ಮತ್ತು ಎಬಿಡಿ ಧೋನಿಯವರೇ ಈ ತಂಡದ ನಾಯಕನಾಗಲಿ ಎಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ಇಂಡಿಯಾದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಅವರನ್ನು ತಮ್ಮ ನೆಚ್ಚಿನ ಏಕದಿನ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಿದ್ದಾರೆ. ಧೋನಿ ನಾಯಕನಾಗಿ ಆಯ್ಕೆ ಮಾಡಿದ್ದರ ಬಗ್ಗೆ ಮಾತನಾಡಿದ ಕೊಹ್ಲಿ ನನಗೆ ಧೋನಿಯೇ ಸರಿ, ಎಂಎಸ್ ಬಹುಶಃ ಬಹಳ ಸಮತೋಲಿತ ನಾಯಕ ಎಂದು ಹೇಳಿದ್ದಾರೆ.

ಈ ವೇಳೆ ಧೋನಿಯ ಬಗ್ಗೆ ಮಾತನಾಡಿದ ವಿಲಿಯರ್ಸ್, ನನಗೆ ಧೋನಿಯನ್ನು ಆಯ್ಕೆ ಮಾಡಿದ್ದಕ್ಕೆ ಖುಷಿಯಿದೆ. ನಾನು ಧೋನಿ ಅವರ ನಾಯಕತ್ವದಲ್ಲಿ ಎಂದು ಆಟವಾಡಿಲ್ಲ. ಆದರೆ ನಾನು ಧೋನಿಯನ್ನು ಗೌರವಿಸುತ್ತೇನೆ. ಅವರು ಮೈದಾನದಲ್ಲಿ ಮತ್ತು ಮೈದಾನದಿಂದ ಆಚೆಗೆ ನಡೆದುಕೊಳ್ಳುವ ರೀತಿ ನನಗೆ ಬಹಳ ಇಷ್ಟ. ಯಾವಾಗಲೂ ಕೂಲ್ ಆಗಿ ಇರುತ್ತಾರೆ ಮತ್ತು ಅವರಿಗೆ ಆಟದ ಬಗ್ಗೆ ತುಂಬಾ ತಿಳಿದಿದೆ. ಹಾಗಾಗಿ ಧೋನಿ ಆಯ್ಕೆ ಸರಿಯಿದೆ ಎಂದು ಹೇಳಿದ್ದಾರೆ.

ಕೊಹ್ಲಿ ಎಬಿಡಿ ನೆಚ್ಚಿನ ಏಕದಿನ ತಂಡ
ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಜಾಕ್ ಕಾಲಿಸ್, ಯುವರಾಜ್ ಸಿಂಗ್, ಎಂಎಸ್ ಧೋನಿ (ನಾಯಕ / ವಿಕೆಟ್ ಕೀಪರ್), ಯುಜ್ವೇಂದ್ರ ಚಹಲ್, ಡೇಲ್ ಸ್ಟೇನ್, ಜಸ್ಪ್ರೀತ್ ಬುಮ್ರಾ, ಕಗಿಸೊ ರಬಡಾ, ಇವರ ಜೊತೆಗೆ ತಂಡದಲ್ಲಿ ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ಮೊರ್ನೆ ಮೊರ್ಕೆಲ್ ಅವರನ್ನೂ ಸಹ ಹೆಚ್ಚುವರಿ ಆಟಗಾರರನ್ನಾಗಿ ಹೆಸರಿಸಲಾಯಿತು.

ಕೊಹ್ಲಿ ಮತ್ತು ಎಬಿಡಿ ಐಪಿಎಲ್ ತಂಡದಲ್ಲಿ ಆರ್.ಸಿ.ಬಿ ಪರವಾಗಿ ಆಡುತ್ತಾರೆ. ಹೀಗಾಗಿ ಭಾರತದಲ್ಲಿ ವಿರಾಟ್ ಮತ್ತು ಡಿವಿಲಿಯರ್ಸ್ ಗೆ ತನ್ನದೇ ಆದ ಅಭಿಮಾನಿ ವರ್ಗವಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಐಪಿಎಲ್ ಶುರುವಾಗಬೇಕಿತ್ತು. ಈ ಇಬ್ಬರು ಆಟಗಾರರನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಕೊರೊನಾ ವೈರಸ್ ಲಾಕ್ಡೌನ್ ನಿಂದ ಐಪಿಎಲ್ ಮುಂದಕ್ಕೆ ಹೋಗಿದೆ. ಹೀಗಾಗಿ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ.

Leave a Reply