ನೀರಿನಲ್ಲಿ ಸಿಲುಕಿದ ರಿಕ್ಷಾ ಹೊರತರಲಾಗದೇ ಬಿಕ್ಕಿಬಿಕ್ಕಿ ಅತ್ತ ಚಾಲಕ: ವಿಡಿಯೋ

ಪಾಟ್ನಾ: ಕಳೆದ ಮೂರು ದಿನಗಳಿಂದ ಬಿಹಾರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಆಗಿದೆ. ರಸ್ತೆಗಳಲ್ಲದೇ ಶಾಪಿಂಗ್ ಮಾಲ್, ರೈಲ್ವೆ ನಿಲ್ದಾಣದಲ್ಲೂ ಮೊಣಕಾಲುದ್ದ ನೀರು ನಿಂತಿದೆ. ಈ ನಡುವೆ ನೀರಿನಲ್ಲಿ ಸಿಲುಕಿದ ರಿಕ್ಷಾವನ್ನು ಹೊರತರಲಾಗದೇ ಚಾಲಕ ಬಿಕ್ಕಿಬಿಕ್ಕಿ ಅಳುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

ಚಾಲಕ ರಿಕ್ಷಾ ಎಳೆಯುತ್ತಿರುವುದನ್ನು ನೋಡಿದ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಅಲ್ಲದೆ ಚಾಲಕನಿಗೆ ಸಹಾಯದ ಮಾತುಗಳನ್ನಾಡಿದ್ದಾರೆ. ಸ್ಥಳೀಯರು ಚಾಲಕನಿಗೆ, “ರಿಕ್ಷಾ ಇಲ್ಲಿಯೇ ಬಿಟ್ಟು ಹೋಗಿ. ಸ್ವಲ್ಪ ಹೊತ್ತಿನ ನಂತರ ಬಂದು ತೆಗೆದುಕೊಂಡು ಹೋಗಿ” ಎಂದು ಹೇಳುತ್ತಿದ್ದಾರೆ. ಆದರೆ ಚಾಲಕ ರಿಕ್ಷಾವನ್ನು ಅಲ್ಲಿಯೇ ಬಿಟ್ಟು ಹೋಗಲು ಒಪ್ಪಲಿಲ್ಲ. ಅಲ್ಲದೆ ಬಿಕ್ಕಿಬಿಕ್ಕಿ ಅಳುತ್ತಾ ರಿಕ್ಷಾವನ್ನು ಹೊರ ಎಳೆಯಲು ಪ್ರಯತ್ನಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಮಂದಿ ಕಮೆಂಟ್ ಮಾಡುವ ಮೂಲಕ ರಾಜಕಾರಣಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಲವರು, “ಸ್ಮಾರ್ಟ್ ಸಿಟಿ ಆಗಿಲ್ಲ, ಬದಲಾಗಿ ಮಂತ್ರಿಗಳ ಸ್ಮಾರ್ಟ್ ಮನೆ ಆಗಿದೆ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, “ಇದು ನಾಚಿಕೆಯಾಗುವ ವಿಷಯ. ಸಾಮಾನ್ಯ ಜನರನ್ನು ನೋಡಲು ಇಲ್ಲಿ ಯಾರು ಇಲ್ಲ” ಎಂದು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ರಾಷ್ಟ್ರೀಯ ಜನತಾ ದಳ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿ, “ಸ್ಮಾರ್ಟ್ ಸಿಟಿ ಹಣವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ನಾಚಿಕೆಯಾಗಬೇಕು. ನಿತೀಶ್ ಕುಮಾರ್ ಹಾಗೂ ಸುಶೀಲ್ ಮೋದಿ ಬಡವರನ್ನು ಆಹುತಿ ಪಡೆದುಕೊಳ್ಳುತ್ತಿದ್ದಾರೆ. ಈ ರೀತಿಯ ವಿಡಿಯೋ ನೋಡಿದರೆ ಕರುಳು ಹಿಂಡುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *